ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಹಸಿರು ಪೀಠ ಸಮ್ಮತಿ

ಮಂಗಳೂರು ಮೇ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದ ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಹಸಿರು ಪೀಠ ಸಮ್ಮತಿ ಸೂಚಿಸಿದೆ.

ಇದೇ 13ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾದಿರಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿದೆ.

ರಾಜ್ಯದ ಬಯಲು ಪ್ರದೇಶಗಳಾದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದ್ದು, ಕರಾವಳಿಯಲ್ಲಿ ಈ ಯೋಜನೆ ವಿರುದ್ದ ಭಾರಿ ವಿರೋಧ ವ್ಯಕ್ತವಾಗಿತ್ತು. ಯೋಜನೆಯಿಂದಾಗಿ ಪಶ್ಚಿಮಘಟ್ಟ ನಾಶವಾಗಲಿದೆ ಎಂದು ಪರಿಸರವಾದಿಗಳು ರಾಷ್ಟ್ರೀಯ ಹಸಿರು ಪೀಠಕ್ಕೆ ಅರ್ಜಿಸಲ್ಲಿಸಿದ್ದರು.

ಈ ಬಗ್ಗೆ ನಿನ್ನೆ ಅಂತಿಮ ತೀರ್ಪು ನೀಡಿದ ಎನ್ ಜಿಟಿ ಯೋಜನೆಗೆ ಕೆಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದ್ದು ಪರಿಸರವಾದಿಗಳು ಯೋಜನೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಹಸಿರು ನ್ಯಾಯಪೀಠ ಈ ತೀರ್ಪು ನೀಡಿದ್ದು ಯೋಜನೆಯಿಂದಾಗಿ ಪಶ್ಚಿಮ ಘಟ್ಟಗಳಿಗೆ ಹಾನಿ ಉಂಟಾಗಲಿದೆ ಎಂದು ವಾದಿಸಿದ್ದ ಪರಿಸರವಾದಿಗಳಿಗೆ ಇದರಿಂದ ಭಾರೀ ಹಿನ್ನೆಡೆಯಾಗಿದೆ.

ಯೋಜನೆಗಾಗಿ ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿ, ಪರಿಸರ ಸಂರಕ್ಷಣೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ. ಸರ್ಕಾರ ಪಡೆದಿರುವ ಪರಿಸರ ಮತ್ತು ಅರಣ್ಯ ಅನುಮತಿಯೂ ಕಾನೂನು ಬಾಹಿರ ಎಂದು ಅರ್ಜಿದಾರರು ದೂರಿದ್ದರು. ಕುಡಿಯುವ ನೀರು ಪೂರೈಸುವ ಸದುದ್ದೇಶದಿಂದ ನಿಯಮಾನುಸಾರವೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯನ್ನು ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಯ ಸಿಂಧುತ್ವವೇ ಪ್ರಶ್ನಾರ್ಹ ಎಂದು ರಾಜ್ಯ ಸರ್ಕಾರ ತನ್ನ ವಾದ ಮಂಡಿಸಿತ್ತು.

ಹಸಿರು ಪೀಠ ತನ್ನ ತೀರ್ಪಿನ ಆಧಾರದ ಮೇಲೆ ಯೋಜನೆಯನ್ನು ಕುಡಿಯುವ ನೀರಿಗಾಗಿ ನಿರ್ಮಿಸುವುದಾದರೆ ಅದಕ್ಕೆ ಪರಿಸರ ನ್ಯಾಯಾಲಯದ ಅನುಮತಿಯ ಅಗತ್ಯವಿಲ್ಲ ಎಂದಿದೆ. ಹಾಗಿದ್ದರೂ ಟ್ರಿಬ್ಯೂನಲ್ ಯೋಜನೆಯ ಮೇಲ್ವಿಚಾರಣೆಗಾಗಿ ಅರಣ್ಯ ಇಲಾಖೆ ಮತ್ತು ಎಂಒಇಎಫ್ ಗೆ ನಿರ್ದೇಶನ ನೀಡಿದ್ದು ಇಲಾಖೆಗಳು ಯೋಜನೆಯಲ್ಲಿ ಯಾವುದೇ ನಿಯಮ ಉಲ್ಲಂಘನೆಯನ್ನು ಕಂಡುಕೊಂಡಲ್ಲಿ ಅಂತಹಾ ವೇಳೆ ಸೂಕ್ತ ಕ್ರಮ ತೆಗೆದುಕೊಳ್ಳಲು ಅವರು ಸ್ವತಂತ್ರರಿದ್ದಾರೆ.

ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ , ತುಮಕುರು ಮತ್ತು ಇತರ ಜಿಲ್ಲೆಗಳ ಅಗತ್ಯಗಳನ್ನು ಪೂರೈಸಲು ನೇತ್ರಾವತಿ ನದಿಯ ಪ್ರಮುಖ ಉಪನದಿಯಾದ ಎತಿನಹೊಳೆಯ ಹರಿವನ್ನು ತಿರುಗಿಸಲು ಯೋಜನೆ ರೂಪಿಸಲಾಗಿದೆ.

ಎನ್ ಜಿಟಿ ತೀರ್ಪಿನ ವಿರುದ್ದ ಕರಾವಳಿಯ ಪರಿಸರ ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕರಾವಳಿಯಲ್ಲಿ ಕುಡಿಯುವ ನೀಡಿನ ಅಹಕಾರ ಉಂಟಾಗಿದ್ದು, ನದಿ ಹಾಗೂ ಜಲ ಮೂಲಗಳು ಬತ್ತಿ ಹೋಗಿವೆ ಇನ್ನು ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಂಡಲ್ಲಿ ಕರಾವಳಿಯ ಜೀವನದಿ ನೇತ್ರಾವತಿ ಶಾಶ್ವತವಾಗಿ ಬತ್ತಿ ಹೋಗಲಿದೆ ಅದರೊಂದಿಗೆ ಕರಾವಳಿ ಸಂಪೂರ್ಣವಾಗಿ ನಾಶವಾಗಲಿದೆ ಎಂಬ ಅತಂಕವನ್ನು ಇಲ್ಲಿನ ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.

Facebook Comments

comments