ಇನ್ನು ಮಂಗಳೂರಿನಲ್ಲಿ ಟೈಮ್ ವೆಸ್ಟ್ ಆಗಲ್ಲ … ಶುರುವಾಗಲಿದೆ ಬೆಂಗಳೂರಿನಿಂದ ಕುಂದಾಪುರಕ್ಕೆ ಹೊಸ ರೈಲು

ಉಡುಪಿ ಫೆಬ್ರವರಿ 11: ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಜಿಲ್ಲೆಯವರಿಗೆ ಒಂದು ಶುಭ ಸುದ್ದಿ ಬಂದಿದ್ದು, ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ರಾಜ್ಯ ರೈಲ್ವೇ ಖಾತೆ ಸಚಿವ ಸುರೇಶ್ ಅಂಗಡಿಯವರು ಹೊಸ ರೈಲನ್ನು ಘೋಷಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಬೇಡಿಕೆ ಹಿನ್ನಲೆ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿಯವರು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ರೈಲ್ವೆ ಸೇವೆಯನ್ನು ಪ್ರಾರಂಭಿಸಲು ಕ್ರಮಕೈಗೊಂಡಿದ್ದಾರೆ.

ಈ ರೈಲು ಪಡೀಲ್ ಬೈಪಾಸ್ ಮೂಲಕ ಉಡುಪಿಯನ್ನು ತಲುಪಲಿದೆ. ಈ ರೈಲು ಸೇವೆಯು ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಷ್ಟು ಕಾಲದ ಅನಗತ್ಯ ಕಾಯುವಿಕೆಯನ್ನು ತಪ್ಪಿಸಿ, ಬೆಂಗಳೂರು-ಉಡುಪಿ/ಕುಂದಾಪುರ ಮಧ್ಯೆ ರೈಲು ಪ್ರಯಾಣ ಸಮಯವನ್ನು ಮೂರು ಗಂಟೆಗಳಷ್ಟು ಕಾಲಕಡಿತಗೊಳಿಸುವ ಮೂಲಕ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಜನತೆ ಕಡಿಮೆ ಸಮಯದಲ್ಲಿ ಕುಂದಾಪುರ ತಲುಪುವಂತೆ ಮಾಡಿದ್ದಾರೆ.

ಈಗಾಗಲೇ ನೈರುತ್ಯ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿರುವ ಸಂಸದೆ ಶೋಭಾ ಕರಂದ್ಲಾಜೆಯವರು ತಕ್ಷಣದಲ್ಲಿಯೇ ಈ ಹೊಸ ರೈಲಿನ ಸೇವೆಯನ್ನು ಆರಂಭಿಸುವಂತೆ ಕೇಳಿಕೊಂಡಿದ್ದಾರೆ.
​​
ಸಂಸದೆ ಶೋಭಾ ಕರಂದ್ಲಾಜೆಯವರ ಸತತ ಪ್ರಯತ್ನದಿಂದಾಗಿ ಆರಂಭಗೊಳ್ಳುತ್ತಿರುವ ಈ ರೈಲು ಬೆಂಗಳೂರಿನಿಂದ ಸಂಜೆ 06:45ಕ್ಕೆ ಹೊರಟು, ಬೆಳಗ್ಗೆ 04:50ಕ್ಕೆ ಉಡುಪಿ, 05:18ಕ್ಕೆ ಕುಂದಾಪುರಕ್ಕೆ ತಲುಪುವುದು. ಸಂಜೆ 04:40ಕ್ಕೆ ವಾಸ್ಕೋದಿಂದ ಆರಂಭಗೊಂಡು, ರಾತ್ರಿ 10:54ಕ್ಕೆ ಕುಂದಾಪುರ, 11:24ಕ್ಕೆ ಉಡುಪಿಯಿಂದ ಹೊರಟು ಬೆಂಗಳೂರಿಗೆ ಬೆಳಿಗ್ಗೆ ಸುಮಾರು 09:00 ಗಂಟೆಗೆ ತಲುಪಲಿದೆ.
ವಾಸ್ಕೋ-ಬೆಂಗಳೂರು ಪ್ರಯಾಣ ಸಮಯವನ್ನು ಇನ್ನಷ್ಟು ಸುಧಾರಣೆಗೊಳಿಸಲಾಗುವುದು ಎಂಬ ಭರವಸೆಯು ರೈಲ್ವೆ ಅಧಿಕಾರಿಗಳಿಂದ ದೊರಕಿದೆ. ಈ ಮೂಲಕ ಕರಾವಳಿ ಕರ್ನಾಟಕದ (ಉಡುಪಿ/ಕುಂದಾಪುರ/ಬೈಂದೂರು/ಕಾರವಾರದ) ದಶಕಗಳ ಬೇಡಿಕೆಯು ಈಡೇರಿದಂತಾಗಿದೆ.

ಉಡುಪಿ-ಕುಂದಾಪುರದ ಪ್ರಯಾಣಿಕರಿಗೆ ಈ ರೈಲು ಬೆಂಗಳೂರು ಹಾಗೂ ವಾಸ್ಕೋವನ್ನು ಸಂಪರ್ಕಿಸಲು ಬೇಕಾದ ಎರಡು ರೈಲಿನ ಸೌಲಭ್ಯವನ್ನು ಒಂದೇ ರೈಲಿನ ಮೂಲಕ ಕಲ್ಪಿಸಿಕೊಡುತ್ತಲಿದೆ ಹಾಗೂ ಗೋವಾ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಅವಶ್ಯವಿದ್ದ ರೈಲಿನ ಬೇಡಿಕೆಯನ್ನೂ ಈಡೇರಿಸಲಿದೆ. ಈ ಹೊಸ ರೈಲು ಇನ್ನು ಕೆಲವೇ ಕೆಲವು ದಿನಗಳಲ್ಲಿ ಓಡಾಟವನ್ನು ಆರಂಭಿಸಲಿದೆ ಎಂದು ಮಾನ್ಯ ಸಚಿವರು ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ.

Facebook Comments

comments