ನವದೆಹಲಿ, ಮಾರ್ಚ್ 24: ನೀವು ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದಲ್ಲಿ ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ ಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ತಂದಿದ್ದು, ಏಪ್ರಿಲ್ 1, 2026 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.
ಇದುವರೆಗೆ ಆಧಾರ್ ಕಾರ್ಡ್ ಮಾತ್ರ ಇದ್ದರೆ ಸುಲಭವಾಗಿ ಪ್ಯಾನ್ ಕಾರ್ಡ್ ಪಡೆಯಬಹುದಿತ್ತು. ಆದರೆ ಇನ್ಮುಂದೆ ಅದು ಸಾಧ್ಯವಾಗುವುದಿಲ್ಲ.
ಹೊಸ ನಿಯಮ?
ಭಾರತ ಸರ್ಕಾರದ ಅಂಗಸಂಸ್ಥೆಯಾಗಿರುವ ಕಾಮನ್ ಸರ್ವೀಸಸ್ ಸೆಂಟರ್ (CSC) ನೀಡಿರುವ ಪ್ರಕಟಣೆಯ ಪ್ರಕಾರ, ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವವರು ಅಥವಾ ಈಗಿರುವ ಪ್ಯಾನ್ ಕಾರ್ಡ್ ಅನ್ನು ನವೀಕರಿಸುವವರು ಇನ್ಮುಂದೆ ಆಧಾರ್ ಕಾರ್ಡ್ ಜೊತೆಗೆ ಹೆಚ್ಚುವರಿ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದೆ. ಈ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸದಿದ್ದರೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಬೇಕಾಗುವ ಹೆಚ್ಚುವರಿ ದಾಖಲೆಗಳು:
ಮಾರ್ಚ್ 31, 2026 ರವರೆಗೆ ಹಳೆಯ ನಿಯಮದಂತೆ ಆಧಾರ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಏಪ್ರಿಲ್ 1 ರಿಂದ ಈ ಕೆಳಗಿನ ಯಾವುದಾದರೂ ಒಂದು ದಾಖಲೆಯನ್ನು ಆಧಾರ್ ಜೊತೆಗೆ ಲಗತ್ತಿಸಬೇಕು:
- ಜನನ ಪ್ರಮಾಣಪತ್ರ (Birth Certificate)
- ಮತದಾರರ ಗುರುತಿನ ಚೀಟಿ (Voter ID)
- 10ನೇ ತರಗತಿಯ ಅಂಕಪಟ್ಟಿ ಅಥವಾ ಪ್ರಮಾಣಪತ್ರ (Class 10 Certificate)
- ಪಾಸ್ಪೋರ್ಟ್ (Passport)
- ಚಾಲನಾ ಪರವಾನಿಗೆ (Driving License)
- ಮ್ಯಾಜಿಸ್ಟ್ರೇಟ್ ಅವರಿಂದ ದೃಢೀಕರಿಸಲ್ಪಟ್ಟ ಅಫಿಡವಿಟ್.