ಮಂಗಳೂರು ಜನವರಿ 05: ನೇಪಾಳದಲ್ಲಿ ನೆಲೆಸಿ ಭಾರತೀಯರನ್ನು ಗುರಿಯಾಗಿಸಿ ನೂರಾರು ಕೋಟಿ ರೂಪಾಯಿ ವಂಚಿಸುತ್ತಿದ್ದ ಬೃಹತ್ ಅಂತಾರಾಷ್ಟ್ರೀಯ ಆನ್ಲೈನ್ ಹೂಡಿಕೆ ವಂಚನೆ ಜಾಲವನ್ನು ಮಂಗಳೂರು ನಗರ ಸೆನ್ (CEN) ಪೊಲೀಸರು ಭೇದಿಸಿದ್ದು, 11 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರೆಸ್ಟ್ ಆದವರ ವಿವರ
1. ಮಕವನ್ ವಿಕ್ರಂ (25) ಬಾವಾ ನಗರ್ ಜಿಲ್ಲೆ ಗುಜರಾತ್.
2. ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21) ಪಶ್ಚಿಮ ಬಂಗಾಳ.
3. ಪುಪ್ಲ ಶಿವ ಕುಮಾರ್ ರಾವ್ (32) ಸಿಂಗಬುಮ್ ಜಿಲ್ಲೆ ಜಾರ್ಖಾಂಡ್
4. ಗೌರವ್ ಪಾಂಡೆ (24) ಉತ್ತರ ಪ್ರದೇಶ.
5. ಹರ್ಷ್ ಮಿಸ್ರಾ (22) ಸುಲ್ತಾನ್ ಪುರ್ ಜಿಲ್ಲೆ ಉತ್ತರ ಪ್ರದೇಶ.
6. ರಾಜೇಶ್ ಮಂಡನ್ (30) ಡಿಯೋಗರ್ ಜಿಲ್ಲೆ ಜಾರ್ಖಾಂಡ್.
7. ಮೊಹಮ್ಮದ್ ಆಕೀಬ್ ಅಲಿ (27) ಲಕ್ನೋ ಜಿಲ್ಲೆ ಉತ್ತರ ಪ್ರದೇಶ.
8. ರಾಜೀವ್ ರಂಜನ್ ಕುಮಾರ್ (30) ನಳಂದ ಜಿಲ್ಲೆ ಬಿಹಾರ್.
9. ಮಿಥುನ್ ಕುಮಾರ್ ಮಂಗರಾಜ್ (38) ಸಿಂಗಬುಮ್ ಜಿಲ್ಲೆ ಜಾರ್ಖಾಂಡ್
10. ನೌಶಾದ್ ಅಲಿ (34) ಝಾನ್ಸಿ ಜಿಲ್ಲೆ ಉತ್ತರ ಪ್ರದೇಶ.
11. ಓಂ ಪ್ರಕಾಶ್ ಯಾಧವ್ (37) ಜೈಪುರ್ ರಾಜಸ್ಥಾನ.
ಪ್ರಕರಣದ ವಿವರ
ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ನೀಡುವುದಾಗಿ ನಂಬಿಸಿ ಬರೋಬ್ಬರಿ 1.38 ಕೋಟಿ ರೂಪಾಯಿ ವಂಚಿಸಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಈ ಜಾಲದ ಸುಳಿವು ಸಿಕ್ಕಿದೆ. ಬಂಧಿತರೆಲ್ಲರೂ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದು, ಈ ಜಾಲದ ಹಿಂದಿದ್ದ ಚೀನಾ ಮೂಲದ ಪ್ರಮುಖ ಆರೋಪಿಗಳನ್ನು ನೇಪಾಳ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತನಿಖೆಯ ವೇಳೆ ಆರೋಪಿಗಳು ಬಳಸುತ್ತಿದ್ದ ಬರೋಬ್ಬರಿ 624 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಕೇವಲ ಒಂದೇ ಒಂದು ಖಾತೆಯಲ್ಲಿ 167 ಕೋಟಿ ರೂ. ವ್ಯವಹಾರ ನಡೆದಿರುವುದು ವಂಚನೆಯ ಭೀಕರತೆಯನ್ನು ತೋರಿಸುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಮಾಯಕರನ್ನು ಸಂಪರ್ಕಿಸಿ, ಬ್ಯಾಂಕ್ ಖಾತೆ ಒದಗಿಸಿದರೆ ಶೇ. 5 ರಿಂದ 10 ರಷ್ಟು ಕಮಿಷನ್ ನೀಡುವುದಾಗಿ ಆಮಿಷ ಒಡ್ಡಿ ಅವರನ್ನು ನೇಪಾಳ, ದುಬೈಗೆ ಕರೆಸಿಕೊಳ್ಳುತ್ತಿದ್ದರು. ನಂತರ ಅವರಿಂದ ಬ್ಯಾಂಕ್ ಖಾತೆ ಮತ್ತು ಸಿಮ್ ಕಾರ್ಡ್ಗಳನ್ನು ಪಡೆದು, ಸಾರ್ವಜನಿಕರಿಂದ ಲೂಟಿ ಮಾಡಿದ ಹಣವನ್ನು ಈ ಖಾತೆಗಳಿಗೆ ವರ್ಗಾಯಿಸಿಕೊಂಡು, ತಕ್ಷಣವೇ ಅದನ್ನು ಕ್ರಿಪ್ಟೋ ಕರೆನ್ಸಿಯಾಗಿ (USDT) ಪರಿವರ್ತಿಸಿ ವಿದೇಶಗಳಿಗೆ ರವಾನಿಸುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಪ್ರಕರಣದಲ್ಲಿ ‘ಡಿಜಿಟಲ್ ಸ್ಲೇವರಿ’ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದ್ದು, ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಕರೆದೊಯ್ದು, ಪಾಸ್ಪೋರ್ಟ್ ಕಸಿದುಕೊಂಡು ಭಾರತೀಯ ಯುವಕರನ್ನೇ ಈ ವಂಚನೆ ಕೃತ್ಯಕ್ಕೆ ಬಲವಂತವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂಬುದು ಬಹಿರಂಗವಾಗಿದೆ.

ವಂಚಕರು ಸೆಬಿ (SEBI) ನೋಂದಾಯಿತ ಸಂಸ್ಥೆಯೆಂದು ನಕಲಿ ಪ್ರಮಾಣಪತ್ರಗಳನ್ನು ತೋರಿಸಿ, ನಕಲಿ ಟ್ರೇಡಿಂಗ್ ಆಪ್ಗಳ ಮೂಲಕ ಹೂಡಿಕೆದಾರರಿಗೆ ಆರಂಭದಲ್ಲಿ ಲಾಭ ಬಂದಂತೆ ತೋರಿಸಿ ನಂಬಿಸುತ್ತಿದ್ದರು. ನಂತರ ಹೆಚ್ಚಿನ ಹಣ ಹೂಡಿಕೆ ಮಾಡಿಸಿ, ಹಣ ಹಿಂಪಡೆಯಲು ಸಾಧ್ಯವಾಗದಂತೆ ಮಾಡಿ ಮೋಸ ಮಾಡುತ್ತಿದ್ದರು. ಆರೋಪಿಗಳು ಬಳಸಿದ ಬ್ಯಾಂಕ್ ಖಾತೆಗಳ ವಿರುದ್ಧ ದೇಶಾದ್ಯಂತ ಇರುವ ‘ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್’ (NCRP) ನಲ್ಲಿ ಈಗಾಗಲೇ 4580ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಇದೊಂದು ದೇಶವ್ಯಾಪಿ ಹಬ್ಬಿದ ವಂಚನೆ ಜಾಲವಾಗಿದೆ. ಸದ್ಯ ಬಂಧಿತರಿಂದ 21 ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ ಹಾಗೂ ವಿವಿಧ ಬ್ಯಾಂಕ್ ಕಾರ್ಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರು ಕಮಿಷನ್ ಆಸೆಗೆ ಬಿದ್ದು ತಮ್ಮ ಬ್ಯಾಂಕ್ ಖಾತೆಗಳನ್ನು ಅಪರಿಚಿತರಿಗೆ ನೀಡಬಾರದು, ಒಂದು ವೇಳೆ ಅಂತಹ ಖಾತೆಗಳು ವಂಚನೆಗೆ ಬಳಕೆಯಾದರೆ ಖಾತೆದಾರರೂ ಸಹ ಸಹ-ಆರೋಪಿಗಳಾಗುತ್ತಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಆನ್ಲೈನ್ ಹೂಡಿಕೆಗೂ ಮುನ್ನ ಎಚ್ಚರ ವಹಿಸಬೇಕು ಮತ್ತು ಸೈಬರ್ ವಂಚನೆ ನಡೆದ ತಕ್ಷಣವೇ ‘1930’ ಸಹಾಯವಾಣಿಗೆ ಕರೆ ಮಾಡಿದರೆ ಕಳೆದುಕೊಂಡ ಹಣವನ್ನು ತಡೆಹಿಡಿಯಲು ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪತ್ತೆ ಕಾರ್ಯ ಮುಂದುವರೆದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಸೈಬರ್ ವಂಚನೆಗೆ ಪರಿಹಾರಗಳು
ವಂಚನೆಯಾದ ಒಂದು ಗಂಟೆಯ ಒಳಗೆ 1930 ಗೆ ಕರೆ ಮಾಡುವುದು ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣವೇ ದೂರು ಸಲ್ಲಿಸುವುದು.
ಆನ್ ಲೈನ್ ಗೇಮ್, ನಕಲಿ ಲೋನ್ ಆ್ಯಪ್, ನಕಲಿ ಪಾರ್ಟ ಟೈಮ್ ಜಾಬ್, ನಕಲಿ ಜಾಬ್ ಆಫರ್, ಗಳಿಂದ ದೂರ ಇರುವುದು.
APK ಫೈಲ್ ಮತ್ತು ಲಿಂಕ್ ಗಳ ಬಗ್ಗೆ ಜಾಗ್ರತೆಯಿಂದ ಇರುವುದು.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳು, ಆಕರ್ಷಿಕ ಹೂಡಿಕೆಗಖ ಬಗ್ಗೆ ಜಾಗ್ರೂತರಾಗಿರವುದು.
ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಪ್ರೇಮ, ಗೆಳೆತನದ ಮೂಲಕ ಬ್ಯಾಂಕ್ ಖಾತೆಗಳನ್ನು ಮತ್ತು ಸಿಮ್ ಗಳನ್ನು ನೀಡುವುದು, ನಿಮ್ಮ ಅರೆ ನಗ್ನ, ಮತ್ತು ನಗ್ನ ಚಿತ್ರಗಳನ್ನು ಹಂಚಿಕೊಳ್ಳುವುದು, ಗಿಫ್ಟ್ ಕಳುಹಿಸುವುದಾಗಿ ವಂಚನಗೆ ಒಳಗಾಗಿ ಹಣವನ್ನು ಕಳುಹಿಸುವುದರಿಂದ ದೂರವಿರಿ.
ವಿಡೀಯೋ ಕಾಲ್ ಮೂಲಕ CBI, POLICE, JUDGES, CUSTOMS, SEBI, TRAI, ಮುಂತಾದ ಇಲಾಖೆಗಳನ್ನು ಬಳಸಿಕೊಳ್ಳುವ ನಕಲಿ ಅಧಿಕಾರಿಗಳಂತೆ ನಟಿಸಿ, ನಿಮಗೆ ದಸ್ತಗಿರಿ ಬೆದರಿಕೆ ನೀಡಿ ಹಣವನ್ನು ಲೂಟಿ ಮಾಡುವ ವ್ಯಕ್ತಿಗಳಿಂದ ದೂರವಿರಿ. ಯಾವುದೇ ವಿಡೀಯೋ ಕಾಲ್ ಮೂಲಕ ದಸ್ತಗಿರಿ ಮಾಡುವ ಕ್ರಮವನ್ನು ಯಾವ ಇಲಾಖೆಯೂ ಅನುಸರಿಸುತ್ತಿಲ್ಲ. ಹಾಗೂ ಭಾರತೀಯ ಕಾನೂನಿನಲ್ಲಿ ಇರುವುದಿಲ್ಲ. ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡುವುದು.
ಆನ್ ಲೈನ್ ಮೂಲಕ ಹೋಟೆಲ್, ಕ್ಯಾಬ್, ಫ್ಲೈಟ್ಸ್ ಬುಕ್ಕಿಂಗ್ ಮಾಡುವಾಗ ಎಚ್ಚರದಿಂದರಬೇಕು.
ಗೂಗಲ್ ನಲ್ಲಿ ಸಿಗುವಂತಹ ಯಾವುದೇ ಕಸ್ಟಮರ್ ಕೇರ್ ಗಳ ಬಗ್ಗೆ ಎಚ್ಚರದಿಂದರಬೇಕು ಹಾಗೂ ಯಾವುದೇ ಓಟಿಪಿಗಳನ್ನು ಶೇರ್ ಮಾಡದೇ ಇರುವುದು.