ಕಾಠ್ಮಂಡು,ಮಾರ್ಚ್ 28: ನೇಪಾಳದ ರಾಜಕೀಯ ಇತಿಹಾಸದಲ್ಲಿ ಎಂದೂ ಕಂಡರಿಯದ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ನೂತನ ಪ್ರಧಾನಿಯಾಗಿ ಬಲೆನ್ ಶಾ ಅವರು ಪ್ರಮಾಣವಚನ ಸ್ವೀಕರಿಸಿದ ಕೇವಲ 24 ಗಂಟೆಗಳ ಅವಧಿಯಲ್ಲಿ, ಮಾಜಿ ಪ್ರಧಾನಿ ಹಾಗೂ ಸಿಪಿಎನ್-ಯುಎಂಎಲ್ ಮುಖ್ಯಸ್ಥ ಕೆಪಿ ಶರ್ಮಾ ಒಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಭಕ್ತಪುರದ ‘ಗುಂಡು’ ಎಂಬಲ್ಲಿರುವ ಅವರ ನಿವಾಸದಿಂದ ಶನಿವಾರ ಬೆಳಿಗ್ಗೆ ಒಲಿ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಇದು ಹಿಮಾಲಯ ರಾಷ್ಟ್ರದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಕಳೆದ 2025ರ ಸೆಪ್ಟೆಂಬರ್ನಲ್ಲಿ ನಡೆದ ‘ಜೆನ್-ಝೆಡ್’ (Gen Z) ಯುವಜನರ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಅಂದಿನ ಒಲಿ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ಪೊಲೀಸ್ ಗುಂಡಿನ ದಾಳಿಯಲ್ಲಿ ಸುಮಾರು 19ಕ್ಕೂ ಹೆಚ್ಚು ಯುವಕರು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಚನೆಯಾಗಿದ್ದ ಗೌರಿ ಬಹದ್ದೂರ್ ಕಾರ್ಕಿ ನೇತೃತ್ವದ ತನಿಖಾ ಆಯೋಗವು, ಒಲಿ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ವರದಿ ನೀಡಿತ್ತು. ಈ ವರದಿಯ ಶಿಫಾರಸಿನ ಅನ್ವಯವೇ ಈಗ ಬಂಧನ ಪ್ರಕ್ರಿಯೆ ನಡೆದಿದೆ.
ರ್ಯಾಪರ್ನಿಂದ ಪ್ರಧಾನಿಯಾಗಿ ಉನ್ನತ ಸ್ಥಾನಕ್ಕೇರಿರುವ ಬಲೆನ್ ಶಾ, ತಮ್ಮ ಮೊದಲ ಸಂಪುಟ ಸಭೆಯಲ್ಲೇ ಭ್ರಷ್ಟಾಚಾರ ಮತ್ತು ಹಳೆಯ ಹಿಂಸಾಚಾರ ಪ್ರಕರಣಗಳ ಕಡತಗಳನ್ನು ತೆರೆಯಲು ಆದೇಶಿಸಿದ್ದರು. “ಯಾರೂ ಕಾನೂನಿಗಿಂತ ಮೇಲಲ್ಲ, ಪ್ರತಿಯೊಬ್ಬರೂ ತಮ್ಮ ಅಧಿಕಾರಾವಧಿಯ ತಪ್ಪುಗಳಿಗೆ ಉತ್ತರಿಸಬೇಕಾಗುತ್ತದೆ” ಎಂದು ನೂತನ ಗೃಹ ಸಚಿವ ಸುದನ್ ಗುರುಂಗ್ ಅವರು ಈ ಬಂಧನದ ಕುರಿತು ಪ್ರತಿಕ್ರಿಯಿಸಿದ್ದಾರೆ. ಒಲಿ ಅವರೊಂದಿಗೆ ಅಂದಿನ ಗೃಹ ಸಚಿವರಾಗಿದ್ದ ರಮೇಶ್ ಲೇಖಕ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬಂಧನದ ವಾರ್ತೆ ಹರಡುತ್ತಿದ್ದಂತೆ ಕೆಪಿ ಶರ್ಮಾ ಒಲಿ ಅವರ ಬೆಂಬಲಿಗರು ಕಾಠ್ಮಂಡು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರವು ದೇಶಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಈ ಬೆಳವಣಿಗೆಯು ನೇಪಾಳದ ರಾಜಕೀಯ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಮುನ್ನುಡಿ ಬರೆದಿದೆ.