ಉಪ್ಪಿನಂಗಡಿ ಫೆಬ್ರವರಿ 16: ನೆಲ್ಯಾಡಿಯಲ್ಲಿರುವ ಮನೆಯೊಂದರಲ್ಲಿ ವೃದ್ದರೊಬ್ಬರು ತಲೆಗೆ ಆದ ಗಂಭೀರ ಗಾಯಗಳಿಂದ ಸಾವನಪ್ಪಿದ ಪ್ರಕರಣದಲ್ಲಿ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದ್ದು, ವೈದ್ಯಕೀಯ ವರದಿ ಬೆನ್ನಲ್ಲೇ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಕೊಲೆಯಾದವರನ್ನು ಕೆ.ಸಿ ವರ್ಗೀಸ್ (73) ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಮಗ ಕೆ.ವಿ. ಥಾಮಸ್ ಅಲಿಯಾಸ್ ವಿಲ್ಸನ್, ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ನಿವಾಸಿ ಸಿ.ಟಿ. ರಾಜು ಅಲಿಯಾಸ್ ವರ್ಗೀಸ್ ಮತ್ತು ಕಡಬ ತಾಲೂಕಿನ ನೆಲ್ಯಾಡಿಯ ಚಾಕೋಚ್ ಅರೆಸ್ಟ್ ಮಾಡಲಾಗಿದೆ.
ಫೆಬ್ರವರಿ 8 ರಂದು ನೆಲ್ಯಾಡಿಯ ಮನೆಯೊಂದರಲ್ಲಿ ವರ್ಗೀಸ್ ತಲೆಗೆ ಗಂಭೀರ ಗಾಯಗಳಿಂದ ಮೃತಪಟ್ಟಿದ್ದರು. ಈ ಘಟನೆ ಕುರಿತಂತೆ ವರ್ಗಿಸ್ ಅವರ ಪುತ್ರ 09.02.2026 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿ ಆರ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದ ಪೊಲೀಸರು ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ. ಕೆ.ಸಿ ವರ್ಗೀಸ್ (73) ಮೃತ ವ್ಯಕ್ತಿಯು ಆತನ ತಲೆಗೆ ಉಂಟಾದ ಗಂಭೀರ ಹಲ್ಲೆಯಿಂದಾಗಿ ಮತ್ತು ದೇಹದ ಇತರ ಭಾಗಗಳಿಗೆ ಆಗಿರುವ ಗಾಯದಿಂದಾಗಿ ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ, ಸದ್ರಿ ಯುಡಿಆರ್ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಿನಾಂಕ:13.02.2026 ರಂದು ಕೊಲೆ ಪ್ರಕರಣವಾಗಿ ಮಾರ್ಪಡಿಸಿ, ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಘಟನೆ ವಿವರ
ಫೆಬ್ರವರಿ 8 ರಂದು ಮೃತ ಕೆ.ಸಿ ವರ್ಗಿಸ್ ತನ್ನ ಹೆಂಡತಿಗೆ ಹೊಡೆದಿದ್ದಾರೆ. ಪೆಟ್ಟು ತಿಂದ ಅವರ ಹೆಂಡತಿ ಮನೆಯಿಂದ ಹೊರಗೆ ಬಂದು ಕುಳಿತಿದ್ದರು. ಇದನ್ನು ನೋಡಿದ ಸ್ಥಳೀಯರೊಬ್ಬರು ವರ್ಗಿಸ್ ಅವರ ಮಗ ಥೋಮಸ್ ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಥೋಮಸ್ ತನಗೆ ಪರಿಚಯದ ಒಬ್ಬ ಆಟೋ ರಿಕ್ಷಾದವರನ್ನು ಕಳುಹಿಸಿ ಅಮ್ಮನನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ವೇಳೆ ಥಾಮಸ್ ಅವರ ಅಮ್ಮನ ತಮ್ಮ ರಾಜು ಎಂಬಾತ ಆಸ್ಪತ್ರೆಗೆ ಬಂದು ನೋಡಿ ತನ್ನ ತಮ್ಮ ಚಾಕೋಚ್ಚನಿಗೆ ಕರೆ ಮಾಡಿ ಅಕ್ಕನಿಗೆ ಅವರ ಗಂಡ ಹೊಡೆದಿರುವುದಾಗಿ ತಿಳಿಸಿ ಬೇಗ ಬಾ ಎಂದು ಕರೆದಿದ್ದಾರೆ.
ಬಳಿಕ ಬಂದ ಇಬ್ಬರು ಥಾಮಸ್ ಗೆ ಕರೆ ಮಾಡಿ ನಿಮ್ಮ ತಂದೆ ಹೆದರಿಸಬೇಕು ಎಂದು ಪ್ಲ್ಯಾನ್ ಮಾಡಿದ್ದಾರೆ. ಬಳಿಕ ಥಾಮಸ್ ನನ್ನು ಸ್ವಲ್ಪ ದೂರ ಹೊರಗೆ ಬಿಟ್ಟು ಚಾಕೊಚ್ಚ ಮತ್ತು ರಾಜುರವರು ಒಳಗೆ ಹೋಗಿ ಕೆ.ಸಿ ವರ್ಗಿಸ್ ರವರಿಗೆ ಕಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಥಾಮಸ್ ರವರಲ್ಲಿ ಅವರಿಗೆ ಸರಿಯಾಗಿ ಹೊಡೆದಿದ್ದೇವೆ ಅವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿ ಹೋಗಿದ್ದಾರೆ.
ಬಳಿಕ ವರ್ಗಿಸ್ ಅವರ ಮಗ ಥಾಮಸ್ ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ನನ್ನ ತಂದೆ ಮಂಚದಿಂದ ಕೆಳಗೆ ಬಿದ್ದು ಅಲ್ಲಿದ್ದ ಕಲ್ಲಿಗೆ ತಲೆ ತಾಗಿ ಪೆಟ್ಟಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನಲೆ ಇದೊಂದು ಆಸ್ವಾಭಾವಿಕ ಪ್ರಕರಣವೆಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ವೈದ್ಯಕೀಯ ವರದಿ ಬಂದ ಬೆನ್ನಲ್ಲೇ ಕೊಲೆ ಮಾಡಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.