ನೆಲಮಂಗಲ, ಏಪ್ರಿಲ್ 22: ರಾಷ್ಟ್ರೀಯ ಹೆದ್ದಾರಿ 48ರ ಅರಿಶಿನಕುಂಟೆ ಸಮೀಪ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕನೊಬ್ಬ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ.

ಅರಿಶಿನಕುಂಟೆ ಬಳಿ ಲಾರಿಯೊಂದು ಪಂಚರ್ ಆಗಿದ್ದ ಕಾರಣ ರಸ್ತೆ ಬದಿಯಲ್ಲಿ ನಿಂತಿತ್ತು. ಈ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಮತ್ತೊಂದು ಲಾರಿ, ನಿಂತಿದ್ದ ಲಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿಯಿಂದ ಬಂದ ಲಾರಿಯ ಮುಂಭಾಗ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಚಾಲಕ ಕ್ಯಾಬಿನ್ ಒಳಗೆ ಸಿಲುಕಿಕೊಂಡಿದ್ದರು. ಅಪಘಾತದ ತೀವ್ರತೆಗೆ ಚಾಲಕನ ಎರಡೂ ಕಾಲುಗಳು ಸ್ಥಳದಲ್ಲೇ ಕಟ್ ಆಗಿವೆ.
ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣ ರಸ್ತೆ ಬದಿ ನಿಂತಿದ್ದ ವಾಹನವನ್ನು ಗಮನಿಸದೆ ನೇರವಾಗಿ ಡಿಕ್ಕಿ ಹೊಡೆದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಅಪಘಾತದ ಬೆನ್ನಲ್ಲೇ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 4 ರಿಂದ 5 ಕಿಲೋಮೀಟರ್ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಚೇರಿ ಹಾಗೂ ತುರ್ತು ಕೆಲಸಗಳಿಗೆ ತೆರಳುತ್ತಿದ್ದ ಸವಾರರು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕಿ ಪರದಾಡಿದರು.
ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಕ್ರೇನ್ ಸಹಾಯದಿಂದ ಅಪಘಾತಕ್ಕೀಡಾದ ಲಾರಿಗಳನ್ನು ರಸ್ತೆಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸದ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿದೆ.