ಮುಂಬೈ: ಬಾಲಿವುಡ್ನ ಖ್ಯಾತ ನಟಿ ನೇಹಾ ಧೂಪಿಯಾ ಅವರು ಮಂಗಳವಾರ ಸಂಜೆ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಛಾಯಾಗ್ರಾಹಕರ (ಪಾಪರಾಜಿಗಳ) ವರ್ತನೆಗೆ ತೀವ್ರವಾಗಿ ತಾಳ್ಮೆ ಕಳೆದುಕೊಂಡು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ನಟಿಯರ ಅನುಮತಿಯಿಲ್ಲದೆ ಅವರ ಹಿಂಭಾಗದಿಂದ (ಬ್ಯಾಕ್ಶಾಟ್) ಅಸಭ್ಯವಾಗಿ ಫೋಟೋ ಹಾಗೂ ವಿಡಿಯೋ ಕ್ಲಿಕ್ ಮಾಡುವುದು ಅತ್ಯಂತ “ಅಗೌರವದ” ಅಭ್ಯಾಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ನೇಹಾ ಧೂಪಿಯಾ ಅವರು ಛಾಯಾಗ್ರಾಹಕರನ್ನು ನೇರವಾಗಿ ಎದುರಿಸಿ ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
“ನನ್ನದಷ್ಟೇ ಅಲ್ಲ, ಯಾರ ಫೋಟೋನೂ ಹೀಗೆ ತೆಗೆಯಬೇಡಿ”:

ವೈರಲ್ ವಿಡಿಯೋದಲ್ಲಿ ನಟಿ ನೇಹಾ ಧೂಪಿಯಾ ಅವರು ಕೋಪದಿಂದಲೇ ಪಾಪರಾಜಿಗಳನ್ನು ಉದ್ದೇಶಿಸಿ, “ನಿಮ್ಮಲ್ಲಿ ಯಾರು ಈ ಬ್ಯಾಕ್ಶಾಟ್ಗಳನ್ನು ಇಷ್ಟು ಅಗೌರವದಿಂದ ಮತ್ತು ಅಸಭ್ಯವಾಗಿ ತೆಗೆದುಕೊಳ್ಳುತ್ತಿದ್ದಾರೆ? ಯಾರು ಅದನ್ನು ಮಾಡುತ್ತಿದ್ದಾರೆ? ಮೊದಲು ನಿಲ್ಲಿಸಿ” ಎಂದು ಕಿಡಿಕಾರಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಇಂತಹ ನಡವಳಿಕೆಗಳು ಕೊನೆಗೊಳ್ಳಬೇಕೆಂದು ನಾವೆಲ್ಲಾ ನಟ-ನಟಿಯರು ಪದೇ ಪದೇ ವಿನಂತಿಸುತ್ತಲೇ ಇದ್ದೇವೆ. ಆದರೂ ನೀವು ಕೇಳುತ್ತಿಲ್ಲ. ನನ್ನದಷ್ಟೇ ಅಲ್ಲ, ಬೇರೆ ಯಾರದೇ ಫೋಟೋಗಳನ್ನೂ ಈ ರೀತಿ ಅಸಭ್ಯವಾಗಿ ಕ್ಲಿಕ್ ಮಾಡಬೇಡಿ. ಇದನ್ನು ಹೇಳಿ ಹೇಳಿ ನಮಗೆ ಸಾಕಾಗಿದೆ. ನಟಿಯರು ಬ್ಯಾಗ್ ಹಿಡಿದುಕೊಂಡು, ಬುಕ್ ಹಿಡಿದುಕೊಂಡು, ಮುಜುಗರದಿಂದ ಹಿಂದಕ್ಕೆ ಹೆಜ್ಜೆ ಹಾಕುವಂತೆ ಮಾಡುವ ಇಂತಹ ಕೆಲಸಗಳು ಇನ್ಮುಂದೆ ನಡೆಯಲ್ಲ. ಇದೆಲ್ಲವನ್ನೂ ತಕ್ಷಣವೇ ಬಂದ್ ಮಾಡಿ” ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ. ನಟಿಯರ ಖಾಸಗಿತನ ಹಾಗೂ ಗೌರವಕ್ಕೆ ಧಕ್ಕೆ ತರುತ್ತಿರುವ ಪಾಪರಾಜಿಗಳ ಸಂಸ್ಕೃತಿಗೆ ಬ್ರೇಕ್ ಬೀಳಬೇಕು ಎಂದು ನೇಹಾ ಧೂಪಿಯಾ ಪರ ಅನೇಕರು ಜಾಲತಾಣಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.