LATEST NEWS
ಕರಾವಳಿಯಲ್ಲಿ ಹಿಂದೂಗಳನ್ನು ಕಡೆಗಣಿಸಿದ್ದೆ ಕಾಂಗ್ರೇಸ್ ಸೋಲಲು ಕಾರಣ – ಎಂಎಲ್ಸಿ ಭೋಜೇಗೌಡ
ಕರಾವಳಿಯಲ್ಲಿ ಹಿಂದೂಗಳನ್ನು ಕಡೆಗಣಿಸಿದ್ದೆ ಕಾಂಗ್ರೇಸ್ ಸೋಲಲು ಕಾರಣ – ಎಂಎಲ್ಸಿ ಭೋಜೇಗೌಡ
ಮಂಗಳೂರು ಅಗಸ್ಟ್ 4: ಕರಾವಳಿಯಲ್ಲಿ ಹಿಂದುಗಳನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಸೋಲಲು ಪ್ರಮುಖ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುತೇಕ ತನ್ನ ಪ್ರಮುಖ ಸ್ಥಾನಗಳನ್ನು ಕಳೆದುಕೊಳ್ಳಲು ಕಾರಣ ಏನೆಂದು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದ ಅವರು ಜಿಲ್ಲೆಯಲ್ಲಿ ಕಾಂಗ್ರೇಸ್ ಸೋಲಿಗೆ ಹಿಂದುಗಳ ಅವಗಣನೆ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಹಿಂದೆ ಕಾಂಗ್ರೇಸ್ ಗೆ ಹಿಂದೂಗಳು ಮತ ಹಾಕಿದ್ದಾರೆ.
ಆದರೆ ಐದು ವರ್ಷ ಅಧಿಕಾರ ನಡೆಸಿದರೂ ಕಾಂಗ್ರೆಸ್ ಗೆ ಈ ಬಾರಿ ಏಕೆ ಹಿಂದೂಗಳು ಮತ ಹಾಕಲಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.
ಒಬ್ಬರನ್ನು ನೋಯಿಸಿ ಇನ್ನೊಬ್ಬರನ್ನು ಓಲೈಸುವ ಪ್ರಯತ್ನ ಮಾಡಬಾರದು. ನಾನು ಹಿಂದುಗಳ ಬಗ್ಗೆ ಹೇಳಿದ್ದೇನೆಯೇ ಹೊರತು ಹಿಂದುತ್ವದ ಬಗ್ಗೆ ಅಲ್ಲ. ಹಿಂದುಗಳ ಅಭಿವೃದ್ಧಿ ಯಾವುದೇ ಒಂದು ಪಕ್ಷಕ್ಕೆ ಗುತ್ತಿಗೆ ನೀಡಿಲ್ಲ. ಇಲ್ಲಿ ಎಲ್ಲ ಜಾತಿ, ವರ್ಗದ ಜನರನ್ನು ಸಮಾನವಾಗಿ ಕಾಣಬೇಕು. ಜೆಡಿಎಸ್ ಕಾರ್ಯಕರ್ತರು ಆ ಕೆಲಸ ಮಾಡಬೇಕು. ಎಲ್ಲ ವರ್ಗದ ಜನರ ಮನಸ್ಸು ಗೆದ್ದು ಪಕ್ಷವನ್ನು ಸಂಘಟಿಸಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅದನ್ನೇ ಹೇರಲು ಸಾಧ್ಯವಿಲ್ಲ. ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆದು, ಹೊಂದಾಣಿಕೆ ಅಥವಾ ಸಮ್ಮಿಶ್ರ ಆಡಳಿತ ನಡೆಸಬಹುದು. ಪಕ್ಷ ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್- ಜೆಡಿಎಸ್‌ಗೆ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದರು.