ಕ್ವೆಟ್ಟಾ ಫೆಬ್ರವರಿ 02: ಪಾಕಿಸ್ತಾನ ಮತ್ತು ಬಲೂಚಿಸ್ತಾನ ನಡುವೆ ನಡೆಯುತ್ತಿರುವ ಆಂತರಿಕ ಸಂಘರ್ಷ ಮುಂದುವರೆದಿದ್ದು, ಇತ್ತೀಚೆಗೆ ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ನಡೆಸಿದ್ದ ಬಲೂಚಿ ಲಿಭರೇಷನ್ ಆರ್ಮಿ ವಿರುದ್ದ ಪಾಕಿಸ್ತಾನ ತಿರುಗಿ ಬಿದ್ದಿದ್ದು, ಭದ್ರತಾ ಪಡೆಗಳು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ 145 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಭಾನುವಾರ ಘೋಷಿಸಿದೆ.


ಕಳೆದ 40 ಗಂಟೆಗಳ ಅವಧಿಯಲ್ಲಿ ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ಪೊಲೀಸ್, ಸೇನೆ ಹಾಗೂ ಅರೆಸೈನಿಕ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಇದೂವರೆಗೆ ದಶಕಗಳಲ್ಲಿ ಕಂಡಿರದಷ್ಟು ಹೆಚ್ಚಿನ ಸಂಖ್ಯೆಯ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ನಡೆದ ಆತ್ಮಾಹುತಿ ಹಾಗೂ ಗುಂಡಿನ ದಾಳಿಗಳಲ್ಲಿ ಒಟ್ಟು 33 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 18 ನಾಗರಿಕರು (ಐದು ಮಹಿಳೆಯರು ಮತ್ತು ಮೂರು ಮಕ್ಕಳು ಸೇರಿ) 15 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಏತನ್ಮಧ್ಯೆ ಯಥಾಪ್ರಕಾರ ಪಾಕಿಸ್ತಾನವು ಈ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪುರಾವೆಯಿಲ್ಲದ ಆರೋಪ ಮಾಡಿದೆ. ಆದರೆ,ಭಾರತದ ವಿದೇಶಾಂಗ ಸಚಿವಾಲಯವು ಇದನ್ನು ಕಟುವಾಗಿ ತಿರಸ್ಕರಿಸಿದ್ದು, ತನ್ನ ಆಂತರಿಕ ಸಮಸ್ಯೆಗಳಿಂದ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಈ ರೀತಿ ಸುಳ್ಳು ಆರೋಪ ಮಾಡುತ್ತಿದೆ. ಮೊದಲು ತನ್ನ ಜನರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ ಎಂದು ಖಡಕ್ ಉತ್ತರ ನೀಡಿದೆ.

ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು, “ಭದ್ರತಾ ಪಡೆಗಳು ಮತ್ತು ಪೊಲೀಸರು ತ್ವರಿತವಾಗಿ ಪ್ರತಿಕ್ರಿಯಿಸಿ, ‘ಫಿತ್ನಾ ಅಲ್-ಹಿಂದೂಸ್ತಾನ್’ಗೆ ಸೇರಿದ 145 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದರು.

Share Information