ಬೆಂಗಳೂರು, ಏಪ್ರಿಲ್ 07: ಸ್ಯಾಂಡಲ್ವುಡ್ನ ಅದ್ದೂರಿ ಚಿತ್ರ ‘ಕೆಡಿ-ದಿ ಡೆವಿಲ್’ ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡಿನ ವಿವಾದವು ಈಗ ರಾಷ್ಟ್ರ ಮಟ್ಟದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಟಿ ನೋರಾ ಫತೇಹಿ ಮತ್ತು ಹಿರಿಯ ನಟ ಸಂಜಯ್ ದತ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಈ ಹಾಡಿನಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು (NCW) ಇಬ್ಬರೂ ಕಲಾವಿದರಿಗೆ ಪ್ರತ್ಯೇಕ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು ಅಂತಿಮ ಗಡುವು ವಿಧಿಸಿದೆ.

ಮಾರ್ಚ್ 2026ರಲ್ಲಿ ಬಿಡುಗಡೆಯಾದ ಈ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಸಮಾಜದ ಸ್ವಾಸ್ಥ್ಯ ಕೆಡಿಸುವಂತಿವೆ ಎಂದು ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ಅವರು ಮಾರ್ಚ್ 25 ರಂದು ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಕಾರಣ, ಏಪ್ರಿಲ್ 01, 2026 ರಂದು ಚಿತ್ರತಂಡವು ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್ನಿಂದ ಅಧಿಕೃತವಾಗಿ ಡಿಲೀಟ್ ಮಾಡಿತ್ತು. ಆದರೂ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಮಹಿಳಾ ಆಯೋಗವು ವಿಚಾರಣೆಯನ್ನು ತೀವ್ರಗೊಳಿಸಿದೆ.
ಏಪ್ರಿಲ್ 06 ರಂದು ನಡೆದ ಪ್ರಾಥಮಿಕ ವಿಚಾರಣೆಯ ವೇಳೆ ನಟಿ ನೋರಾ ಫತೇಹಿ ಅವರು ಗೈರುಹಾಜರಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆಯೋಗವು, ಅವರ ಪರ ವಕೀಲರ ವಾದವನ್ನು ತಿರಸ್ಕರಿಸಿದೆ. ನಟಿಯೇ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿರುವ ಆಯೋಗವು ಏಪ್ರಿಲ್ 27, 2026 ರೊಳಗೆ ಹಾಜರಾಗುವಂತೆ ಅವರಿಗೆ ಅಂತಿಮ ನೋಟಿಸ್ ನೀಡಿದೆ. ಮತ್ತೊಂದೆಡೆ, ನಟ ಸಂಜಯ್ ದತ್ ಅವರಿಗೆ ಏಪ್ರಿಲ್ 08, 2026 ರ ಅಂದರೆ ನಾಳೆಯೊಳಗೆ ಸಮಗ್ರ ವಿವರಣೆ ನೀಡುವಂತೆ ಆದೇಶಿಸಿದೆ.
ಈಗಾಗಲೇ ಚಿತ್ರದ ನಿರ್ದೇಶಕ ಪ್ರೇಮ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಪರವಾಗಿ ಸಂಬಂಧಪಟ್ಟವರು ಆಯೋಗದ ಮುಂದೆ ಹಾಜರಾಗಿ ಲಿಖಿತ ಕ್ಷಮೆಯಾಚನೆ ಮಾಡಿದ್ದಾರೆ. ತಪ್ಪೊಪ್ಪಿಗೆಯ ಭಾಗವಾಗಿ ಮುಂದಿನ ಮೂರು ತಿಂಗಳ ಕಾಲ ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಅಭಿಯಾನ ನಡೆಸುವುದಾಗಿ ಚಿತ್ರತಂಡ ಭರವಸೆ ನೀಡಿದೆ.