ಮಂಗಳೂರು ಮೇ 30: ನವ ಮಂಗಳೂರು ಬಂದರು ಪ್ರಾಧಿಕಾರದ ಆಶ್ರಯಲ್ಲಿ ಇಂಡಿಯನ್ ಓಪನ್ ಆಫ್ ಸರ್ಫಿಂಗ್ನ ಏಳನೇ ಆವೃತ್ತಿಯು ಶುಕ್ರವಾರ ಮಂಗಳೂರಿನ ಬ್ಲೂ ಬೇ ತಣ್ಣೀರುಬಾವಿ ಇಕೋ ಬೀಚ್ನಲ್ಲಿ ಆರಂಭವಾಯಿತು. ಜಪಾನ್ ನಲ್ಲಿ ನಡೆಯುವ ಏಷ್ಯನ್ ಗೇಮ್ಸ್ ಆಯ್ಕೆಯ ಪೂರ್ವಭಾವಿಯಾಗಿ ನಡೆದ ಈ ಪಂದ್ಯಾಟದಲ್ಲಿ ಉತ್ತಮ ಸಾಧನೆ ತೋರಿದ ಸರ್ಫರ್ ಗಳನ್ನು ಏಷ್ಯನ್ ಗೇಮ್ಸ್ ಗೆ ಆಯ್ಕೆ ಮಾಡುವ ಅವಕಾಶವನ್ನೂ ಹೊಂದಲಾಗಿದೆ.
ಮುಂದಿನ ಸೆಪ್ಟೆಂಬರ್ ತಿಂಗಳು ಜಪಾನ್ ನಲ್ಲಿ ನಡೆಯುವ ಏಷ್ಯನ್ ಗೇಮ್ಸ್ ನಲ್ಲಿ ಸರ್ಫರ್ ಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಮಂಗಳೂರಿನ ತಣ್ಣೀರುಬಾವಿಯ ಬ್ಲೂ ಬೇ ಬೀಚ್ ನಲ್ಲಿ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಪಂದ್ಯಾಟವನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಮೇ 29 ರಂದು ಆರಂಭಗೊಂಡ ಈ ಪಂದ್ಯಾಟ ಮೇ 31 ರ ವರೆಗೆ ನಡೆಯಲಿದ್ದು, ದೇಶದ 80 ಕ್ಕೂ ಮಿಕ್ಕಿದ ಸರ್ಫರ್ ಗಳು ಈ ಪಂದ್ಯಾಟದಲ್ಲಿ ಭಾಗಿಯಾಗಿದ್ದಾರೆ. ನವ ಮಂಗಳೂರು ಬಂದರು ಪ್ರಾಧಿಕಾರ, ರಾಷ್ಟ್ರೀಯ ಸರ್ಫಿಂಗ್ ಸಂಸ್ಥೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಹಲವು ಸಂಘಸಂಸ್ಥೆಗಳ ಆಶ್ರಯಲ್ಲಿ ನಡೆಯುತ್ತಿರುವ ಸರ್ಫಿಂಗ್ ನಡೆಯುತ್ತಿದ್ದು ಈ ಪಂದ್ಯಾಟದಲ್ಲಿ , ರಾಷ್ಟ್ರೀಯ ಮಟ್ಟದ ಪ್ರಮುಖ 20 ಸರ್ಫರ್ ಗಳು ಈ ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದು, ಈ ಪಂದ್ಯಾಟದಲ್ಲಿ ಉತ್ತಮ ಅಂಕಗಳೊಂದಿಗೆ ಗೆಲ್ಲುವ ಸರ್ಫರ್ ಗಳನ್ನು ಏಷ್ಯನ್ ಗೇಮ್ಸ್ ನ ತಂಡದಲ್ಲಿ ಪರಿಗಣಿಸುವ ಅವಕಾಶವೂ ಇದೆ. 18 ವರ್ಷ ವಯೋಮಾನದ ಕೆಳಗಿನ ಬಾಲಕಿಯರ, ಬಾಲಕರ, 18 ವರ್ಷ ವಯೋಮಾನದ ಮೇಲಿನ ಮಹಿಳೆ ಮತ್ತು ಪುರುಷ ಹಾಗು ಮಹಿಳಾ ಮತ್ತು ಪುರುಷರ ಓಪನ್ ವಿಭಾಗಗಳು ಈ ಪಂದ್ಯೂಕೂಟದಲ್ಲಿದೆ.
ಮಹಿಳಾ ಓಪನ್ ವಿಭಾಗದಲ್ಲಿ, ಕಮಲಿ ಮೂರ್ತಿ, ಶುಗರ್ ಶಾಂತಿ ಬನಾರ್ಸೆ, ಇಶಿತಾ ಮಾಳವಿಯಾ, ದೇವಿ ರಾಮನಾಥನ್, ಸಾನ್ವಿ ಹೆಗ್ಡೆ ಮತ್ತು ಶ್ರಿಷ್ಟಿ ಸೆಲ್ವಂ ಅವರು ಮೇ 31ರಂದು ನಡೆಯಲಿರುವ ಸೆಮಿಫೈನಲ್ಗೆ ಮುನ್ನಡೆದಿದ್ದಾರೆ.
ಪುರುಷರ ಓಪನ್ ವಿಭಾಗವು 12 ಹೀಟ್ಗಳಲ್ಲಿ ತನ್ನ ಆರಂಭಿಕ ಸುತ್ತನ್ನು ಪೂರ್ಣಗೊಳಿಸಿದರೆ, ಮಹಿಳಾ ಓಪನ್ ಸ್ಪರ್ಧೆಯು ಕ್ವಾರ್ಟರ್-ಫೈನಲ್ ಹಂತವನ್ನು ದಾಟಿದೆ. ಜೂನಿಯರ್ ವಿಭಾಗಗಳು ಸಹ ತೀವ್ರ ಸ್ಪರ್ಧೆಗೆ ಸಾಕ್ಷಿಯಾಗಿತ್ತು. 18 ವರ್ಷದೊಳಗಿನ ಬಾಲಕರ ವಿಭಾಗವು ತನ್ನ ಆರಂಭಿಕ ಸುತ್ತಿನ ಹೀಟ್ಗಳಲ್ಲಿ ಸ್ಪರ್ಧಿಸಿದ್ದು, ಹೊಸದಾಗಿ ಪರಿಚಯಿಸಲಾದ 14 ವರ್ಷದೊಳಗಿನ ಬಾಲಕರ ವಿಭಾಗವು ಕ್ವಾರ್ಟರ್-ಫೈನಲ್ ಗೆ ಮುನ್ನಡೆದಿದೆ.
ಪುರುಷರ ಓಪನ್ ವಿಭಾಗದಲ್ಲಿ 45 ಸರ್ಫರ್ಗಳು ಅರ್ಹತೆಗಾಗಿ ನಡೆದ 12 ಹೀಟ್ಗಳಲ್ಲಿ ಸ್ಪರ್ಧಿಸಿದರು. ಪ್ರತಿ ಹೀಟ್ನಿಂದ ಅಗ್ರ ಎರಡು ಸರ್ಫರ್ಗಳು ನಿಗದಿಯಾಗಿದ್ದ 2 ನೇ ಸುತ್ತಿಗೆ ಮುನ್ನಡೆದಿದ್ದಾರೆ.
ಮಹಿಳಾ ಓಪನ್ ಕ್ವಾರ್ಟರ್-ಫೈನಲ್ನಲ್ಲಿ ತಮಿಳುನಾಡಿನ ಕಮಲಿ ಮೂರ್ತಿ 13.83 ಸ್ಕೋರ್ನೊಂದಿಗೆ ದಿನದ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದರು. ಗೋವಾದ ಶುಗರ್ ಶಾಂತಿ ಬನಾರ್ಸೆ 11.00 ಸ್ಕೋರ್ನೊಂದಿಗೆ ಉತ್ತಮ ಸ್ಪರ್ಧೆ ನೀಡಿದ್ದಾರೆ. ಇಬ್ಬರೂ ಸರ್ಫರ್ಗಳು ಸವಾಲಿನ ಪರಿಸ್ಥಿತಿಗಳಲ್ಲಿ ತಮ್ಮ ಪ್ರದರ್ಶನ ಮತ್ತು ಕುಶಲ ಕೌಶಲ್ಯದಿಂದ ಸೆಮಿಫೈನಲ್ನಲ್ಲಿ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿದ್ಧಾರೆ.
ಸೆಮಿಫೈನಲ್ನಲ್ಲಿ ಇಶಿತಾ ಮಾಳವೀಯ (6.40), ದೇವಿ ರಾಮನಾಥನ್ (5.90), ಸಾನ್ವಿ ಹೆಗ್ಡೆ (5.37) ಮತ್ತು ಸೃಷ್ಟಿ ಸೆಲ್ವಂ (5.33) ಭಾಗವಹಿಸಿದ್ದರು.
ಸರ್ಫಿಂಗ್ ಜೂನಿಯರ್ಸ್ ಅಂಡರ್-18 ಬಾಲಕರ ವಿಭಾಗದಲ್ಲಿಯೂ ಅತ್ಯಾಕರ್ಷಕ ಪ್ರದರ್ಶನ ಕಂಡುಬಂದಿದ್ದು, ಕ್ವಾರ್ಟರ್ ಫೈನಲ್ಗೆ ತಲುಪಲು ಆರು ಹೀಟ್ಗಳಲ್ಲಿ 19 ಸರ್ಫರ್ಗಳು ಸ್ಪರ್ಧಿಸಿದ್ದರು. ಅರ್ಹತೆ ಪಡೆದ ಸರ್ಫರ್ಗಳಲ್ಲಿ ಹರೀಶ್ ಪಿ (12.67), ತಯಿನ್ ಅರುಣ್ (10.33), ಸೋಮ್ ಸೇಥಿ (9.93), ಪ್ರದೀಪ್ ಪೂಜಾರ್ (9.07), ಪ್ರಹ್ಲಾದ್ ಶ್ರೀರಾಮ್ (8.60), ಶೇಕ್ ದಾವೂದ್ ಎಸ್ (6.93), ಯೋಗೇಶ್ ಎ (6.33), ರಾಜು ಸುರೇಶ್ ಪೂಜಾರ್ (5.63), ಪ್ರವೀಣ್ ಪೂಜಾರ್ (4.40), ಹರುಸ್ ಮೊಹೈಯದೀನ್ (3.63), ಸಂಕು ಕಾರ್ತೇಕ್ (3.07) ಮತ್ತು ಆಕಾಶ್ ಪೂಜಾರ್ (2.57) ಸೇರಿದ್ದಾರೆ.
ಹೊಸದಾಗಿ ಪರಿಚಯಿಸಲಾದ ಸರ್ಫಿಂಗ್ ಜೂನಿಯರ್ಸ್ ಅಂಡರ್-14 ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಹರೀಶ್ ಪಿ (11.33), ಶೇಕ್ ದಾವೂದ್ ಎಸ್ (6.67), ಯೋಗೇಶ್ ಎ (6.50), ಪ್ರಹ್ಲಾದ್ ಶ್ರೀರಾಮ್ (5.43), ಪ್ರಶಾಂತ್ (4.53), ಮುಖೇಶ್ (3.70), ಲಿಖಿತ್ ಸಾಲಿಯನ್ (2.67) ಮತ್ತು ಇಶಾಂತ್ ಕೆ. ಸತೀಶ್ (2.07) ಶನಿವಾರ ನಿಗದಿಯಾಗಿದ್ದ ಸೆಮಿಫೈನಲ್ಗೆ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿದ್ದಾರೆ.
ಮಂಗಳೂರಿನ ತಣ್ಣೀರುಬಾವಿ ಬೀಚ್ ನಲ್ಲಿ ನಡೆದ ಈ ಪಂದ್ಯಾಟದಲ್ಲಿ ಭಾಹವಹಿಸಿದ ಎಲ್ಲಾ ಸರ್ಫರ್ ಗಳಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸರ್ಫಿಂಗ್ ಪಂದ್ಯಾಟಕ್ಕೆ ಬೇಕಾದ ಎಲ್ಲಾ ರೀತಿಯ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಂಗಳೂರಿನ ಬೀಚ್ ಸರ್ಫರ್ ಗಳಿಗೆ ಉತ್ತಮವಾಗಿದ್ದು, ಸಮುದ್ರದ ಅಲೆಗಳು ಸರ್ಫರ್ ಗಳಿಗೆ ಉತ್ತಮ ಪ್ರದರ್ಶನವನ್ಮು ತೋರಿಸಲು ಅನುವು ಮಾಡಿಕೊಟ್ಡಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಈ ಪಂದ್ಯಾಕೂಟದ ಮೂಲಕ ಮುಂದಿನ ಪಂದ್ಯಾಟಕ್ಕೆ ಹೆಚ್ಚಿನ ಶ್ರಮವಹಿಸಲೂ ಸಾಧ್ಯವಾಗಿದೆ.
ಮೇ 31 ಕ್ಕೆ ಈ ಪಂದ್ಯಾಟದ ಫೈನಲ್ ನಡೆಯಲಿದ್ದು, ಇದರಲ್ಲಿ ಗೆಲ್ಲುವ ಕ್ರೀಡಾಪಟುವಿಗೆ ಏಷ್ಯನ್ ಗೇಮ್ಸ್ ನಲ್ಲಿ ಭಾಗಿಯಾಗುವ ಅವಕಾಶವಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಉತ್ರಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ.