ಮಂಗಳೂರು, ಡಿ.20: ಅಂಡರ್‌ವಾಟರ್‌ ಸ್ಪೋರ್ಟ್ಸ್ ಫೆಡರೇಶನ್‌ ಆಫ್‌ ಇಂಡಿಯಾ ವತಿಯಿಂದ ಫಿಸಿಕಲ್‌ ಎಜುಕೇಶನ್‌ ಫೌಂಡೇಶನ್‌ ಆಫ್‌ ಇಂಡಿಯಾ ಹಾಗೂ ಕರ್ನಾಟಕ ಫಿನ್‌ ಸ್ವಿಮ್ಮಿಂಗ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಡಿಸೆಂಬರ್ 19ರಿಂದ 22ರ ವರೆಗೆ ನಗರದ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಆಯೋಜಿಸಲಾಗಿರುವ ‘5ನೇ ರಾಷ್ಟ್ರೀಯ ಫಿನ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ 2025‘ ಶನಿವಾರದಂದು ಉದ್ಘಾಟನೆಗೊಂಡಿತು.


ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಾತನಾಡಿ, ಇಂತಹ ಈಜುಸ್ಪರ್ಧೆ ಅಪರೂಪವಾಗಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜನೆಯಾಗುತ್ತಿದೆ. ಇದು ಸ್ಥಳೀಯ ಪ್ರತಿಭೆಗಳಿಗೂ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಗೆಲುವಿಗೆ ನಿರಂತರ ಪ್ರಯತ್ನ ಅಗತ್ಯ. ವಿವಿಧ ಕ್ಷೇತ್ರಗಳಲ್ಲಿ ಬೆಳೆದಿರುವ ಮಂಗಳೂರಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಅಗತ್ಯವಾದ ಕ್ರೀಡಾಂಗಣ ಮತ್ತು ಇತರ ಮೂಲಸೌಕರ್ಯಗಳನ್ನು ಕೂಡ ಒದಗಿಸಿಕೊಡಲಾಗುತ್ತಿದೆ ಎಂದು ಹೇಳಿದರು.


ದೇಶದ ವಿವಿಧ ರಾಜ್ಯಗಳ 1,000ಕ್ಕೂ ಹೆಚ್ಚು ಈಜುಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು 8 ವರ್ಷದಿಂದ 70 ವರ್ಷದವರೆಗೆ ವಿವಿಧ ವಯೋಮಾನದಲ್ಲಿ ಹಲವು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. 144 ಇವೆಂಟ್‌ಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

Share Information