Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶುರುವಾಗಿದೆ ಹೆಸರಿಡುವ ರಾಜಕೀಯ ಡೊಂಬರಾಟ, ನಾರಾಯಣ ಗುರು, ಕೋಟಿ-ಚೆನ್ನಯರೇ ಇದಕ್ಕೆ ಬಲಿ…..

    ಮಂಗಳೂರು, ನವಂಬರ್ 21: ಕೊರೊನಾ ಲಾಕ್ ಡೌನ್ ಬಳಿಕ ಜನ ಜೀವನದಲ್ಲಿ ಅಸ್ತವ್ಯಸ್ತವಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೀಗ ಹೊಸದೊಂದು ಟ್ರೆಂಟ್ ಶುರುವಾಗಿದೆ. ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ಯೀಯ ಹೆದ್ದಾರಿಗಳು ಕೆಟ್ಟು ಸಂಚಾರವೇ ದುಸ್ತರವಾಗಿರುವಾಗ ಈ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ಇಂಥಹ ಟ್ರೆಂಡ್ ಶುರುವಾಗಿರುವುದು ಮಾತ್ರ ವಿಪರ್ಯಾಸವೇ.

    ಹೌದು ಇದು ಹೆಸರಿಡುವ ಡೊಂಬರಾಟ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರಿಡಿ, ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರಿಡಿ, ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರು ಹೆಸರಿಡಿ ಹೀಗೆ ಇಡೀ ದಕ್ಷಿಣಕನ್ನಡ ಜಿಲ್ಲೆಗೆ ಕೋಟಿ-ಚೆನ್ನಯ, ನಾರಾಯಣ ಗುರು ಹೆಸರಿಡಿ ಅಭಿಯಾನವನ್ನು ಕೆಲವು ರಾಜಕಾರಣಿಗಳು ಹಾಗೂ ಸಂಘಟನೆಗಳು ಆರಂಭಿಸಿದೆ.

    ದಿನಕ್ಕೊಂದರಂತೆ ಹೆಸರಿಡಿ ಎನ್ನುವ ಮನವಿಗಳು ಹಾರಾಡುತ್ತಿದ್ದು, ಮನವಿಗೆ ಸ್ಪಂದಿಸದಿದ್ದಲ್ಲಿ ನಾಲ್ಕೈದು ಜನ ಸೇರಿ ಒಂದು ಪ್ರತಿಭಟನೆಯನ್ನೂ ನಡೆಸಲಾಗುತ್ತಿದೆ. ಅಂದಹಾಗೆ ಕೋಟಿ-ಚೆನ್ನಯ, ನಾರಾಯಣ ಗುರು ಹೆಸರಿಡಿ ಎಂದು ಮನವಿ ಮಾಡುವ ಹಿಂದೆ ರಾಜಕೀಯ ಡೊಂಬರಾಟದ ವಾಸನೆ ಬಡಿಯಲಾರಂಭಿಸಿದೆ. ಜಿಲ್ಲೆಯಲ್ಲಿ ನೂರೂರು ಜ್ವಲಂತ ಸಮಸ್ಯೆಯಿರುವಾಗ ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಕೆಲವು ಮಂದಿ ಒಂದೇ ಸವನೆ ಆ ಹೆಸರಿಡಿ, ಈ ಹೆಸರಿಡಿ ಎಂದು ಅರಚಾಡಲಾರಂಭಿಸಿದ್ದಾರೆ. ಕೋಟಿ-ಚೆನ್ನಯ ಹಾಗೂ ನಾರಾಯಣ ಗುರುಗಳ ಮೇಲೆ ಇವರಿಗೆ ಎಷ್ಟು ಅಭಿಮಾನ ಇದೆ ಎನ್ನುವುದು ಮಾತ್ರ ಪ್ರಶ್ನಾರ್ಥಕವಾಗಿಯೇ ಇದೆ.

    ಕೋಟಿ-ಚೆನ್ನಯರ ಹೆಸರಿಡಿ ಎಂದು ಅರಚುತ್ತಿರುವ ಈ ಮಂದಿ ಕೋಟಿ-ಚೆನ್ನಯರ ಜನ್ಮಸ್ಥಳವಾದ ಪುತ್ತೂರಿನ ಪಡುಮಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಯಾವ ರೀತಿ ಭಾಗಿಯಾಗಿದ್ದಾರೆ ಎನ್ನುವ ಪ್ರಶ್ನೆಗಳೂ ಇದೀಗ ಏಳಲಾರಂಭಿಸಿದೆ. ಕೇವಲ ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಜಿಲ್ಲೆಯ ಪ್ರಬಲ ಸಮುದಾಯವೊಂದರ ಆರಾಧ್ಯ ಪುರುಷರ ಹೆಸರನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡುವುದು ಎಷ್ಟು ಸರಿ ಎನ್ನುವ ಅಭಿಪ್ರಾಯಗಳೂ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.

    ಪ್ರಸ್ತುತ ವಿಮಾನ ನಿಲ್ದಾಣ, ರೈಲು ನಿಲ್ದಾಣ, ರಸ್ತೆ, ವೃತ್ತಕ್ಕೆ ಕೋಟಿ-ಚೆನ್ನಯ, ನಾರಾಯಣ ಗುರು ಹೆಸರಿಡಿ ಎಂದು ಮನವಿ ಮಾಡುತ್ತಿರುವ ಈ ಮಂದಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಅಂಗಡಿ-ಮುಂಗಟ್ಟು, ಹಳ್ಳ-ತೊರೆಗಳ ಜೊತೆಗೆ ಒಳ್ಳೇದು, ಕೆಟ್ಟದ್ದು ಎಲ್ಲದಲ್ಲೂ ಇದೇ ಹೆಸರಿಡಿ ಎಂದು ಮನವಿ ಮಾಡದಿದ್ದರೆ ಸಾಕು ಎನ್ನುವ ಚಿಂತೆಯಲ್ಲಿ ಜಿಲ್ಲೆಯ ಪ್ರಜ್ಞಾವಂತ ಜನರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply