ಮಂಗಳೂರು ಸೆಪ್ಟೆಂಬರ್ 03: ರಾಷ್ಟ್ರ ಕ್ಕಾಗಿ ಮಧ್ಯಸ್ಥಿಕೆ” ಎಂಬ 90 ದಿನಗಳ ವಿಶೇಷ ಮಧ್ಯಸ್ಥಿಕಾ ಅಭಿಯಾನವು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ದ ಆದೇಶದ ಮೇರೆಗೆ 01.07.2025 ರಿಂದ 07.10.2025 ರವರೆಗೆ ಹಮ್ಮಿಕೊಂಡಿದ್ದು, ಇದರಲ್ಲಿ ನಮ್ಮ ಜಿಲ್ಲೆಯ ಸುಮಾರು 50 ನುರಿತ ವಕೀಲರು ಮಧ್ಯಸ್ಥಗಾರರಾಗಿ ಮಧ್ಯಸ್ಥಿಕೆ ಪುಕ್ರಿಯೆಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅದೇ ರೀತಿ, ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ತ್ವರಿತ ನ್ಯಾಯಕ್ಕಾಗಿ, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮೂಡಬಿದ್ರಿ ಮತ್ತು ಸುಳ್ಯ ನ್ಯಾಯಾಲಯಗಳ ಆವರಣಗಳಲ್ಲಿ ದಿನಾಂಕ 13.09.2025 ರಂದು ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಆಯೋಜಿಸಲಾಗಿದೆ.

ಮೇಲ್ಕಂಡ 90 ದಿನಗಳ ಮಧ್ಯಸ್ಥಿಕೆ ಅಭಿಯಾನ ಮತ್ತು ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಹಾಗೂ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಅತೀ ಶೀಘ್ರದಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ.

ಮಧ್ಯಸ್ಥಿಕೆ ಅಭಿಯಾನ ಮತ್ತು ಲೋಕ್ ಅದಾಲತನಲ್ಲಿ ಈ ಕೆಳಗಿನ ಪ್ರಕರಣಗಳನ್ನು ರಾಜೀ ಇತ್ಯರ್ಥಪಡಿಸಬಹುದಾಗಿದೆ. ಸಂಧಾನದ ಮುಖಾಂತರ

1. ಮೋಟಾರು ವಾಹನ ಅಪಘಾತ ಪ್ರಕರಣಗಳು.
2. ಚೆಕ್ಕು ಅಮಾನ್ಯ ಹಾಗೂ ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು.
3. ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು.
4. ಕಾರ್ಮಿಕ ಹಾಗೂ ನಷ್ಟ ಪರಿಹಾರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು.
5. ವಿಚ್ಛೇದನ ಪ್ರಕರಣವನ್ನು ಹೊರತುಪಡಿಸಿ ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು.
6. ಗ್ರಾಹಕರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು
7 ಭೂಸ್ವಾಧೀನ ಹಾಗೂ ಭೂ ಸ್ವಾಧೀನ ಪರಿಹಾರ ಹಂಚಿಕೆ ಪ್ರಕರಣಗಳು,
8. ವಿದ್ಯುತ್ ಹಾಗೂ ನೀರಿನ ಶುಲ್ಕಕ್ಕೆ ಸಂಬಂಧಪಟ್ಟ ಪ್ರಕರಣಗಳು.
9. ವೇತನ ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳ ಹಾಗೂ ಪಿಂಚಣಿ ಪ್ರಕರಣಗಳು.
10.ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಪ್ರಕರಣಗಳು.
11. ಕಾನೂನಾತ್ಮಕವಾಗಿ ರಾಜೀಯಾಗಬಲ್ಲ ಎಲ್ಲಾ ರೀತಿಯ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು,

ಅದರಲ್ಲಿ ನ್ಯಾಯಾಧೀಶರು ಹಾಗೂ ಸಂಬಂಧಪಟ್ಟ ಪ್ರಕರಣಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸುತ್ತಾರೆ. ಇಬ್ಬರು ಪಕ್ಷಿಗಾರರು ಪ್ರಕರಣವನ್ನು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನವನ್ನು ನೀಡಲಾಗುವುದು.


ಪಕ್ಷಗಾರರಿಗೆ ಒಪ್ಪಿಗೆಯಾಗುವಂತೆ ವಿವಾದಗಳು ಇತ್ಯರ್ಥವಾಗುವುದರಿಂದ ಇಬ್ಬರ ಸಂಬಂಧವು ಉಳಿದು ಇಬ್ಬರು ಗೆದ್ದ ಮನೋಭಾವದಿಂದ ಸಂತೋಷವಾಗಿರಬಹುದು.
ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು ಹಾಗೂ ಸದರಿ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಇರುವುದಿಲ್ಲ. ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ ಪಡೆದುಕೊಂಡು ತಮ್ಮ ಸಮಯ ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳಲು ಇದೊಂದು ವಿಶೇಷ ಅವಕಾಶವಾಗಿದೆ.

ಆದುದರಿಂದ ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಇಚ್ಚಿಸಿ ಸೂಚಿಸಿದ್ದಲ್ಲಿ ಕೇಂದ್ರಕ್ಕೆ ನ್ಯಾಯಾಲಯಗಳಿಂದ ಪ್ರಕರಣಗಳನ್ನು ಮಧ್ಯಸ್ಥಿಕಾ ಸೂಚಿಸಲಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಉಭಯ ಪಕ್ಷಗಾರರನ್ನು ಕರೆಸಿಕೊಂಡು ದಕ್ಷಿಣ ಕನ್ನಡ ನ್ಯಾಯಾಲಯದ ಸಮುಚ್ಚಯದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲ್ಲೂಕು ನ್ಯಾಯಾಲಯಗಳ ಆವರಣಗಳಲ್ಲಿರುವ ಮಧ್ಯಸ್ಥಿಕಾ ಕೇಂದ್ರಗಳಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು. ಸಾರ್ವಜನಿಕರು ತಮ್ಮ ಪ್ರಕರಣಗಳು ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇದ್ದಲ್ಲಿ ಗೌರವಾನ್ವಿತ ಉಚ್ಚನ್ಯಾಯಾಲಯ, ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಆವರಣಗಳಲ್ಲಿರುವ ಮಧ್ಯಸ್ಥಿಕಾ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

ಅದೇ ರೀತಿ ರಾಜ್ಯಪಾಲರ ಆದೇಶದನ್ವಯ ಸಾರಿಗೆ ಇಲಾಖೆಯಿಂದ ಹೊರಡಿಸಿರುವ ದಿನಾಂಕ 21.08.2025 ರ ಆದೇಶದಂತೆ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾದ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ.

ಈ ರಿಯಾಯಿತಿಯು ಮುಂಬರುವ ರಾಷ್ಟ್ರೀಯ ಲೋಕ್ ಅದಾಲತ್ ದಿನಾಂಕ ೧೩.೦೯.೨೦೨೫ ರ ಸಂಬಂಧ ಆದೇಶಿಸಲಾಗಿದ್ದು, ಇದು ದಿನಾಂಕ 23.08.2025 ರಿಂದ ದಿನಾಂಕ 12.09.2025 ರ ವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಶೇ. 50 ರಿಯಾಯಿತಿಯಲ್ಲಿ ದಂಡ ಪಾವತಿಸುವ ಮೂಲಕ ತಮ್ಮ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಇದೆ ಎಂದು ಈ ಮೂಲಕ ಸೂಚಿಸಲಾಗಿದೆ

Share Information