ನ್ಯಾಯಾಲಯದ ಮೆಟ್ಟಿಲೇರಿದ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್

ಮಂಗಳೂರು ಮೇ 18: ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿವಾಧಾತ್ಮಕ ಟ್ವೀಟ್ ಇದೀಗ ನ್ಯಾಯಲಯದ ಮೆಟ್ಟಿಲೇರಿದ್ದು, ನಳಿನ್ ವಿರುದ್ದ ಪ್ರಕರಣ ದಾಖಲಿಸಬೇಕೆಂದು ವಕೀಲರೋಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಚೀಲ್ ಅವರ ಗೋಡ್ಸೆ ಟ್ವೀಟ್ ಭಾರಿ ವಿವಾದ ಸೃಷ್ಠಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಳಿನ್ ಕುಮಾರ್ ಗೆ ನೋಟಿಸ್ ಜಾರಿ ಮಾಡಿ 10 ದಿನಗಳೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಈ ನಡುವೆ ನಳಿನ್ ಕುಮಾರ್ ಕಟೀಲ್ ಅವರ ಟ್ವೀಟ್ ವಿವಾದ ಇದೀಗ ನ್ಯಾಯಾಲಯದ ಮೆಟ್ಟಲೇರಿದೆ. ‘ಗೋಡ್ಸೆ ಒಬ್ಬರನ್ನು ಕೊಂದ, ರಾಜೀವ್‌ ಗಾಂಧಿ 17 ಸಾವಿರ ಜನರನ್ನು ಕೊಲೆ ಮಾಡಿದ್ದು, ಯಾರು ಹೆಚ್ಚು ಕ್ರೂರಿಗಳು’ ಎಂದು ಟ್ವೀಟ್ ಮಾಡಿದ ದಕ್ಷಿಣ ಕನ್ನಡ ಸಂಸದ ನಳಿನಕುಮಾರ್ ಕಟೀಲ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಯುವ ವಕೀಲ ರಮೇಶ್ ನಾಯಕ್ ಅವರು ಬೆಂಗಳೂರಿನ ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನಳಿನ್‌ಕುಮಾರ್ ಅವರು ಟ್ವೀಟರ್‌ನಲ್ಲಿ ನೀಡಿದ ಹೇಳಿಕೆ, ಒಂದು ದೃಶ್ಯ ಮಾಧ್ಯಮ, ಒಂದು ಇಂಗ್ಲಿಷ್ ಮುದ್ರಣ ಮಾಧ್ಯಮದ ವರದಿ ಉಲ್ಲೇಖಿಸಿ ರಮೇಶ್ ನಾಯಕ್ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನಗರದ ಕ್ಯಾತ್ಸಂದ್ರ ಠಾಣೆಯಲ್ಲಿ ನಳಿನ್‌ಕುಮಾರ್ ಕಟೀಲ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ‘ನ್ಯಾಯಾಲಯವು ನಾನು ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ್ದು, 27ಕ್ಕೆ ವಿಚಾರಣೆಗೆ ಬರಲಿದೆ ಎಂದು ರಮೇಶ್‌ ನಾಯಕ್ ಮಾಹಿತಿ ನೀಡಿದ್ದಾರೆ.