Connect with us

    DAKSHINA KANNADA

    ಪೂಜಾರಿ ಕಾಲಿಗೆರಗಿದ ಕಟೀಲ್ : ಕಟೀಲಿಗೆ ಪೂಜಾರಿ ಹೀಗೇ ಹೇಳುವುದಾ..!?

    ಪೂಜಾರಿ ಕಾಲಿಗೆರಗಿದ ಕಟೀಲ್ : ಕಟೀಲಿಗೆ ಪೂಜಾರಿ ಹೀಗೇ ಹೇಳುವುದಾ..!?

    ಮಂಗಳೂರು,ಮಾರ್ಚ್ 24 : ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕುವ ಮುನ್ನ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹಿರಿಯ ಕಾಂಗ್ರೆಸ್ ‌ಮುಖಂಡ ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. 

    ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜಾರಿ ಆಶೀರ್ವಾದ ಪಡೆದ ನಳಿನ್, ಬಳಿಕ ಪೂಜಾರಿ ಅವರ ಜೊತೆ ‌ಕೆಲಹೊತ್ತು ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಳಿನ್, ಗೋಕರ್ಣನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಮಿಥುನ್ ರೈ ಗೆಲ್ಲಲ್ಲ ಅಂದ್ರ ಪೂಜಾರಿ..!?

    ನಳಿನ್ ‌ಕುಮಾರ್ ಗೆ ಆಶೀರ್ವಾದ ಮಾಡಿದ ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ನಳಿನ್ ಕುಮಾರ್ ‌ಕಟೀಲ್ ಗೆ ದೇವರು ಒಳ್ಳೆಯದು ಮಾಡ್ತಾರೆ. ಕಾಂಗ್ರೆಸ್ ನ ಮಿಥುನ್ ರೈ ಒಳ್ಳೆಯ ಅಭ್ಯರ್ಥಿ, ಆದ್ರೆ ಕಾಂಗ್ರೆಸ್ ಗೆ ಈಗ ಪರಿಸ್ಥಿತಿ ಒಳ್ಳೆಯದಿಲ್ಲ. ಇನ್ನು ಎರಡು ಎಲೆಕ್ಷನ್ ಗೆ ಮೋದಿಯವರೇ ಬರ್ತಾರೆ,‌ ಮತ್ಯಾರು ಬರಲ್ಲ. ಇಡೀ ದೇಶದಲ್ಲೇ ಮೋದಿ ಬರ್ತಾರೆ, ಮೂಡ್ ಹಾಗಿದೆ ಅಂದ್ರು. ಅಲ್ಲದೇ ಹೈಕಮಾಂಡ್ ಹೇಳಿದ್ರೆ ದ.ಕ ಜಿಲ್ಲೆಯ ‌ಕಾಂಗ್ರೆಸ್ ಅಭ್ಯರ್ಥಿ ‌ಪರ ಪ್ರಚಾರಕ್ಕೆ ಹೋಗ್ತೇನೆ, ಹೈಕಮಾಂಡ್ ನಿರ್ದೇಶನ ಕೊಟ್ರೆ ಹೋಗದೇ ಇರಲು ಆಗಲ್ಲ. ದ.ಕ ಜಿಲ್ಲೆಯಲ್ಲಿ ‌ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ‌ಕೊಡಬೇಕು ಅಂತ ಮಿಥುನ್ ಗೆ ಕೊಟ್ಟಿದ್ದಾರೆ. ಆದ್ರೆ ಎರಡು‌ ಎಲೆಕ್ಷನ್ ಗೆ ಇಲ್ಲಿ ಯಾರೂ ಗೆಲ್ಲಲ್ಲ. ಮೋದಿಯವರಿಗೆ ಅವರ ಅಭಿವೃದ್ಧಿಯೇ ಪ್ಲಸ್ ಪಾಯಿಂಟ್. ಅವರು ದೇಶದಲ್ಲಿ ‌ಅಭಿವೃದ್ದಿ ಮಾಡಿದ್ದಾರೆ ಅಂದ್ರು.

    ನಳಿನ್‌ಗೆ ಮೂರನೇ ಭಾರಿ ಪೂಜಾರಿ ಆಶೀರ್ವಾದ .!

    ಹೌದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ನಳಿನ್ ಕುಮಾರ್ ಕಟೀಲ್ ಅವರು ಇದೀಗ ಮೂರನೇ ಭಾರಿ ಆಶೀರ್ವದಿಸಿ ಹರಸಿದ್ದಾರೆ.ಕಳೆದ 2 ಬಾರಿ ಸಂಸದರಾಗಿದ್ದಾಗ ಕೂಡ ನಳಿನ್ ಪೂಜಾರಿ ಅವರ ಆಶಿರ್ವಾದ ಪಡೆದೇ ಚುನಾವಣಾ ಆಖಾಡಕ್ಕಿಳಿದು ವಿಜಯ ಶಾಲಿಗಳಾಗಿದ್ದರು. ನಳಿನ್ ಪಾಲಿಗೆ ಪೂಜಾರಿ ಆಶಿರ್ವಾದ ಗೆಲುವಿನ ಸಂಕೇತ ಕೂಡ ಹೌದು ಆದ್ದರಿಂದ ಈ ಬಾರಿಯೂ ಎಲ್ಲಕ್ಕಿಂತ ಮೊದಲು ಕಾಂಗ್ರೆಸ್ ಹಿರಿಯ ನಾಯಕರಾದ ಪೂಜಾರಿ ಕಾಲಿಗೆ ಬಿದ್ದಿದ್ದಾರೆ. ಆಶೀರ್ವಾದ ಪಡೆದ ಬಳಿಕ ಬಿಜೆಪಿ ಅಭ್ಯರ್ಥಿ ನಳಿನ್ ‌ಕುಮಾರ್ ಮಾತನಾಡಿ, ಜನಾರ್ದನ ಪೂಜಾರಿ ನಮ್ಮಂಥವರಿಗೆ ಆದರ್ಶ ವ್ಯಕ್ತಿ. ಭ್ರಷ್ಟಾಚಾರ ರಹಿತವಾದ ನೇರ ನಡೆ ನುಡಿಯ ರಾಜಕಾರಣಿ. ಜನಾರ್ದನ ಪೂಜಾರಿಯನ್ನು ನಾನು ಬಹಳ ಗೌರವದಿಂದ ಕಂಡವ. 2009ರ ಚುನಾವಣೆ ವೇಳೆ ಅವರ ವಿರುದ್ದ ಸ್ಪರ್ಧಿಸಿದ್ರೂ ಅವರ ಆಶೀರ್ವಾದ ಪಡೆದಿದ್ದೆ. ಆವತ್ತು ಕೂಡ ಅವರು ಅಭ್ಯರ್ಥಿ ಆಗಿದ್ರೂ ನನಗೆ ಒಳ್ಳೆದಾಗಲಿ ಅಂತ ಆಶೀರ್ವಾದ ಮಾಡಿದ್ರು. ಇವತ್ತು ಕೂಡ ಒಳ್ಳೆಯದಾಗಲಿ ಅಂತ ಸಂಪೂರ್ಣ ಮನಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ. ಎರಡು ಬಾರಿ ಅವರ ಆಶೀರ್ವಾದದಿಂದ ಗೆದ್ದಿದ್ದೇನೆ, ಮೂರನೇ ಬಾರಿ ಅವರ ಆಶೀರ್ವಾದದಿಂದ ಗೆಲ್ತೇನೆ. ಆದರ್ಶಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಮಾರ್ಗದರ್ಶನ ಮಾಡಿದ್ದಾರೆ. ಹೀಗಾಗಿ ಅವರು ನನಗೆ ರಾಜಕೀಯ ಗುರುಗಳು. ಒಂದು ಕಡೆಯಿಂದ ದೇವರ ಆಶೀರ್ವಾದ, ಇನ್ನೊಂದು ಕಡೆ ನಾರಾಯಣ ಗುರು ಮತ್ತು ಜನಾರ್ದನ ಪೂಜಾರಿ ಆಶೀರ್ವಾದ. ಇದನ್ನ ಪಡೆದು ಇವತ್ತಿನಿಂದಲೇ ನಾನು ಕಣಕ್ಕೆ ಇಳಿಯುತ್ತಿದ್ದೇನೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply