ಕೇರಳ ಜೂನ್ 24: ಉಮ್ಮತ್ತೂರಿನಲ್ಲಿ ಬುಧವಾರ ಬೆಳಿಗ್ಗೆ ಎರಡು ವರ್ಷದ ಬಾಲಕಿಯೊಬ್ಬಳ ತಲೆ ಆಕಸ್ಮಿಕವಾಗಿ ಅಲ್ಯೂಮಿನಿಯಂ ಅಡುಗೆ ಪಾತ್ರೆಯೊಳಗೆ ಸಿಲುಕಿಕೊಂಡಿದ್ದು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯ ಎಚ್ಚರಿಕೆಯ ಕಾರ್ಯಾಚರಣೆ ನಡೆಸಿ ಮಗುವಿನ ತಲೆಯಿಂದ ಪಾತ್ರೆ ತೆಗೆದಿದ್ದಾರೆ.

ಫಾತಿಮಾ ಅಲಿಯಾ ಎಂಬ ಎರಡು ವರ್ಷದ ಬಾಲಕಿ ಬುಧವಾರ ಬೆಳಿಗ್ಗೆ ಮನೆಯ ಅಡುಗೆಮನೆಯಲ್ಲಿ ಆಟವಾಡುತ್ತಿದ್ದಾಗ ಕುತೂಹಲದಿಂದ ಅಲ್ಯೂಮಿನಿಯಂ ಪಾತ್ರೆಯೊಂದನ್ನು ತಲೆಯ ಮೇಲೆ ಇಟ್ಟುಕೊಂಡಿದ್ದಾಳೆ. ಆದರೆ ಆ ಪಾತ್ರೆ ತಕ್ಷಣವೇ ಕೆಳಗೆ ಜಾರಿ ಆಕೆಯ ತಲೆಯ ಸುತ್ತಲೂ ಅತ್ಯಂತ ಬಿಗಿಯಾಗಿ ಸಿಲುಕಿಕೊಂಡಿದೆ. ಇದನ್ನು ತೆಗೆಯಲು ಸಾಧ್ಯವಾಗದೆ ಮಗು ಜೋರಾಗಿ ಕಿರುಚಾಡಿ ಭಯಭೀತಗೊಂಡಿದೆ.
ಮಗುವಿನ ಕಿರುಚಾಟ ಹಾಗೂ ಅಳುವಿನ ಧ್ವನಿ ಕೇಳಿ ಧಾವಿಸಿ ಬಂದ ಕುಟುಂಬದ ಸದಸ್ಯರು, ಪಾತ್ರೆಯನ್ನು ಹೊರತೆಗೆಯಲು ತರಹೇವಾರಿ ವಿಧಾನಗಳನ್ನು ಪ್ರಯತ್ನಿಸಿದ್ದಾರೆ. ಆದರೆ ಪಾತ್ರೆ ಮಗುವಿನ ಮೂಗಿನವರೆಗೂ ಗಟ್ಟಿಯಾಗಿ ಆವರಿಸಿದ್ದರಿಂದ ಅವರ ಎಲ್ಲಾ ಪ್ರಯತ್ನಗಳು ವಿಫಲಗೊಂಡವು. ಮಗುವಿನ ಆತಂಕ ಹೆಚ್ಚಾಗುತ್ತಿದ್ದನ್ನು ಗಮನಿಸಿದ ಪೋಷಕರು ತಕ್ಷಣವೇ ಬಾಲಕಿಯನ್ನು ನಾದಾಪುರಂ ಅಗ್ನಿಶಾಮಕ ಮತ್ತು ರಕ್ಷಣಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಅಗ್ನಿಶಾಮಕ ಕೇಂದ್ರದ ನಿಲ್ದಾಣಾಧಿಕಾರಿ ಎಸ್. ವರುಣ್ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. “ಪಾತ್ರೆ ಬಾಲಕಿಯ ಮುಖವನ್ನು ಮೂಗಿನವರೆಗೆ ಸಂಪೂರ್ಣವಾಗಿ ಮುಚ್ಚಿದ್ದರಿಂದ ಮಗು ತೀವ್ರ ಆತಂಕಕ್ಕೊಳಗಾಗಿತ್ತು. ನಮ್ಮ ಸಿಬ್ಬಂದಿ ಮೊದಲು ಮಗುವಿಗೆ ಧೈರ್ಯ ತುಂಬಿ ಶಾಂತಗೊಳಿಸಿದರು” ಎಂದು ನಿಲ್ದಾಣದ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಪ್ರಬೀಶ್ ತಿಳಿಸಿದ್ದಾರೆ.
ತದನಂತರ ಸಿಬ್ಬಂದಿ ವಿಶೇಷ ಕತ್ತರಿಸುವ (Cutting) ಮತ್ತು Spreading ನ ಅತ್ಯಾಧುನಿಕ ಸಾಧನಗಳನ್ನು ಬಳಸಿ, ಮಗುವಿನ ತಲೆಗೆ ಯಾವುದೇ ಸಣ್ಣ ಗಾಯವೂ ಆಗದಂತೆ ಅತ್ಯಂತ ಜಾಗರೂಕತೆಯಿಂದ ಅಲ್ಯೂಮಿನಿಯಂ ಪಾತ್ರೆಯನ್ನು ಕತ್ತರಿಸಿ ಹೊರತೆಗೆದಿದ್ದಾರೆ. ಸುಮಾರು 15 ನಿಮಿಷಗಳ ಕಾಲ ನಡೆದ ಈ ರಕ್ಷಣಾ ಕಾರ್ಯಾಚರಣೆಯ ಬಳಿಕ ಪೋಷಕರು ನಿಟ್ಟುಸಿರು ಬಿಟ್ಟಿದ್ದು, ಮಗುವನ್ನು ಸುರಕ್ಷಿತವಾಗಿ ಕುಟುಂಬಕ್ಕೆ ಒಪ್ಪಿಸಲಾಗಿದೆ.