ಮೈಸೂರು,ಮಾರ್ಚ್ 28: ವಿಧಿ ಆಟ ಕ್ರೂರವಾದದ್ದು. ಅತ್ತ ಕಣ್ಣೆದುರೇ ಮದುವೆಯಾಗಿ ಹತ್ತಾರು ವರ್ಷ ಜೊತೆಯಾಗಿದ್ದ ಪತಿ ಇನ್ನಿಲ್ಲ ಎಂಬ ಕಹಿ ಸತ್ಯ.. ಇತ್ತ ತನ್ನನ್ನೇ ನಂಬಿ ಕುಳಿತಿರುವ ನೂರಾರು ವಿದ್ಯಾರ್ಥಿಗಳ ಪರೀಕ್ಷೆಯ ಭವಿಷ್ಯ. ಈ ಎರಡರ ನಡುವೆ ಆ ತಾಯಿ ಆರಿಸಿಕೊಂಡಿದ್ದು ಮಾತ್ರ ತನ್ನ ವೃತ್ತಿಧರ್ಮವನ್ನು!

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ. ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರ ಈ ಕಥೆ ಕೇಳಿದರೆ ಕಲ್ಲು ಮನಸ್ಸಿನವರೂ ಕರಗುತ್ತಾರೆ. ಪತಿಯ ಸಾವಿನ ಅತೀವ ನೋವಿನ ನಡುವೆಯೂ ಕಣ್ಣೀರು ನುಂಗಿ ಶಾಲೆಗೆ ಹಾಜರಾದ ಇವರು, ಗಣಿತದ ಪಾಠ ಮಾಡುವ ಮೂಲಕ ‘ಗುರು’ ಎನ್ನುವ ಪದಕ್ಕೆ ಹೊಸ ಅರ್ಥ ನೀಡಿದ್ದಾರೆ.
ಮೈಸೂರಿನ ದಟ್ಟಗಳ್ಳಿ ನಿವಾಸಿಯಾಗಿರುವ ಜ್ಯೋತಿ ಅವರ ಪತಿ, ಸಾಫ್ಟ್ವೇರ್ ಎಂಜಿನಿಯರ್ ಕಿರಣ್ ಕುಮಾರ್ (47) ಅವರು ಮಾರ್ಚ್ 25ರ ಬುಧವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಮಾರ್ಚ್ 28ರಂದು ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ. ಗ್ರಾಮೀಣ ಭಾಗದ ಮಕ್ಕಳಿಗೆ ಗಣಿತವೆಂದರೆ ಒಂದು ರೀತಿಯ ನಡುಕ. “ನಾನು ಈ ಸಮಯದಲ್ಲಿ ಜೊತೆಗಿಲ್ಲದಿದ್ದರೆ ನನ್ನ ಮಕ್ಕಳು ಪರೀಕ್ಷೆಯಲ್ಲಿ ಕಂಗಾಲಾಗಬಹುದು” ಎಂಬ ಆತಂಕ ಜ್ಯೋತಿ ಅವರ ಕಣ್ಣೀರನ್ನು ಮೀರಿ ನಿಂತಿತ್ತು. ಪತಿಯ ಅಂತ್ಯಕ್ರಿಯೆ ಮುಗಿದ ಮರುದಿನವೇ (ಗುರುವಾರ), ಇನ್ನೂ ಮನೆಯಲ್ಲಿ ಸೂತಕದ ಛಾಯೆ ಇರುವಾಗಲೇ ಅವರು ಶಾಲೆಗೆ ಹೆಜ್ಜೆ ಹಾಕಿದರು.
ಶಾಲೆಯ ಆವರಣ ಪ್ರವೇಶಿಸಿದಾಗ ಮಕ್ಕಳ ಕಣ್ಣಲ್ಲೂ ನೀರಿತ್ತು. ಆದರೆ ಜ್ಯೋತಿ ಅವರು ಮಾತ್ರ ಗಟ್ಟಿಯಾಗಿ ನಿಂತು, “ಮಕ್ಕಳೇ ಹೆದರಬೇಡಿ, ನಾನು ನಿಮ್ಮ ಜೊತೆಗಿದ್ದೇನೆ” ಎಂದು ಧೈರ್ಯ ತುಂಬಿದರು. ಕಠಿಣವಾದ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಾ, ಪರೀಕ್ಷೆಯ ಸಿದ್ಧತೆ ಮಾಡಿಸುತ್ತಾ ಅವರು ವೃತ್ತಿಪರತೆಯ ಪರಾಕಾಷ್ಠೆ ಮೆರೆದರು. ವಿಷಯ ತಿಳಿದು ಶಾಲೆಗೆ ಬಂದ ಬಿಇಒ ರಾಜು ಅವರು ಜ್ಯೋತಿ ಅವರ ಸ್ಥಿತಿ ಕಂಡು ಮರುಗಿದರು. “ಅಮ್ಮಾ, ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ದಯವಿಟ್ಟು ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ, ನಾವು ಪರ್ಯಾಯ ವ್ಯವಸ್ಥೆ ಮಾಡುತ್ತೇವೆ” ಎಂದರು. ಆದರೆ ಜ್ಯೋತಿ ಅವರು ವಿನಯದಿಂದಲೇ ನುಡಿದ ಮಾತುಗಳು ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತು.“ಗಣಿತವನ್ನು ಮೊದಲಿನಿಂದ ನಾನೇ ಕಲಿಸಿದ್ದೇನೆ. ನನ್ನ ಮಕ್ಕಳು ಪರೀಕ್ಷೆಯಲ್ಲಿ ಸೋಲಬಾರದು. ಅವರು ಉತ್ತಮ ಅಂಕ ಪಡೆದರೆ ನನ್ನ ಪತಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ. ನಾಳೆಯೂ ನಾನು ಬಂದು ಮಕ್ಕಳಿಗೆ ಬೆಂಬಲವಾಗಿರುತ್ತೇನೆ” ಎಂದು ಅವರು ಹೇಳಿದಾಗ ಇಡೀ ಶಾಲೆಯೇ ಸ್ತಬ್ದವಾಗಿತ್ತು.
ತನ್ನ ವೈಯಕ್ತಿಕ ಬದುಕಿನ ಅತಿದೊಡ್ಡ ದುಃಖವನ್ನು ಪಕ್ಕಕ್ಕಿಟ್ಟು, ಸಮಾಜದ ಆಸ್ತಿಯಾದ ಮಕ್ಕಳ ಭವಿಷ್ಯಕ್ಕಾಗಿ ಮಿಡಿದ ಜ್ಯೋತಿ ಅವರ ಈ ಕಾರ್ಯ ಕೇವಲ ವರದಿಯಲ್ಲ; ಅದೊಂದು ಪ್ರೇರಣೆ. ಇಂದು ಇಡೀ ಮೈಸೂರು ಜಿಲ್ಲೆ ಮಾತ್ರವಲ್ಲದೆ, ನಾಡಿನ ಜನತೆ ಈ ‘ಅಕ್ಷರ ಮಾತೆ’ಯ ಕರ್ತವ್ಯನಿಷ್ಠೆಗೆ ತಲೆಬಾಗುತ್ತಿದೆ.