ಮೈಸೂರು, ಮೇ 06: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರನ್ನು ತಡೆಯಲು ಮೈಸೂರು ಮಹಾನಗರ ಪಾಲಿಕೆ ‘ಮಾಸ್ಟರ್ ಪ್ಲಾನ್’ ರೂಪಿಸಿದೆ. ರಸ್ತೆ ಬದಿಯ ಕಾಂಪೌಂಡ್ ಗೋಡೆಗಳಿಗೆ ಬೃಹತ್ ಸ್ಟೀಲ್ ಕನ್ನಡಿಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಿರುವ ಕಾಂಪೌಂಡ್ ಗೋಡೆಗಳ ಬಳಿ ಅನೇಕರು ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಇದನ್ನು ತಡೆಯಲು ಪಾಲಿಕೆಯು ಈಗ ಗೋಡೆಗಳಿಗೆ ಕನ್ನಡಿಗಳನ್ನು ಅಂಟಿಸಿದೆ. ಇದರ ಹಿಂದಿರುವ ಉದ್ದೇಶ ಯಾರಾದರೂ ಅಲ್ಲಿ ಮೂತ್ರ ವಿಸರ್ಜನೆಗೆ ನಿಂತರೆ, ಕನ್ನಡಿಯ ಕಾರಣದಿಂದ ಅವರು ತಮ್ಮನ್ನು ತಾವೇ ನೋಡಿಕೊಳ್ಳಬೇಕಾಗುತ್ತದೆ. ಜೊತೆಗೆ ರಸ್ತೆಯಲ್ಲಿ ಸಂಚರಿಸುವವರಿಗೂ ಅವರು ಸ್ಪಷ್ಟವಾಗಿ ಕಾಣಿಸುತ್ತಾರೆ. ಇದು ಮೂತ್ರ ವಿಸರ್ಜನೆ ಮಾಡುವವರಿಗೆ ಮುಜುಗರ ಉಂಟುಮಾಡುತ್ತದೆ ಮತ್ತು ಈ ಕೆಟ್ಟ ಅಭ್ಯಾಸದಿಂದ ಅವರು ದೂರ ಸರಿಯುತ್ತಾರೆ ಎಂಬುದು ಪಾಲಿಕೆಯ ಲೆಕ್ಕಾಚಾರ.
ಪ್ರಾಯೋಗಿಕವಾಗಿ ಈ ಯೋಜನೆಯನ್ನು ನಗರದ ಎರಡು ಪ್ರಮುಖ ಕಡೆಗಳಲ್ಲಿ ಜಾರಿಗೆ ತರಲಾಗಿದೆ. ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಮೋರಿ ಬಳಿ, ಸರ್ಕಾರಿ ಅತಿಥಿಗೃಹದ ಕಾಂಪೌಂಡ್ ಗೋಡೆಗೆ, ಇಲ್ಲಿ ಸಾಮಾನ್ಯವಾಗಿ ಬಸ್ ಪ್ರಯಾಣಿಕರು ಮತ್ತು ದಾರಿಹೋಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದು, ಸಾರ್ವಜನಿಕ ಸ್ಥಳವನ್ನು ಅಶುಚಿಗೊಳಿಸುತ್ತಿದ್ದರು. ಈಗ ಕನ್ನಡಿ ಅಳವಡಿಸಿರುವುದರಿಂದ ಅಲ್ಲಿನ ಚಿತ್ರಣವೇ ಬದಲಾಗಿದೆ.
ಕೇವಲ ಹಗಲಷ್ಟೇ ಅಲ್ಲದೆ, ರಾತ್ರಿ ವೇಳೆಯೂ ಕೃತ್ಯ ನಡೆಯಬಾರದು ಎಂಬ ಕಾರಣಕ್ಕೆ ಕನ್ನಡಿಯ ಕೆಳಭಾಗದಲ್ಲಿ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಇದರಿಂದ ರಾತ್ರಿ ಹೊತ್ತು ಯಾರಾದರೂ ಅಲ್ಲಿಗೆ ಬಂದರೆ ಬೆಳಕಿನ ಕಾರಣದಿಂದ ಎಲ್ಲರಿಗೂ ಕಾಣಿಸುತ್ತಾರೆ.
ಪಾಲಿಕೆಯ ಈ ವಿಶೇಷ ಐಡಿಯಾಗೆ ಮೈಸೂರು ಜನರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಬರೆಸಿದರೂ ಕೇಳದ ಜನರಿಗೆ, ಈ ಕನ್ನಡಿ ಐಡಿಯಾ ಸರಿಯಾದ ಪಾಠ ಕಲಿಸುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ವಿಶಿಷ್ಟ ಪ್ರಯೋಗದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಒಂದು ವೇಳೆ ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ನಗರದ ಇತರೆ ಬ್ಲ್ಯಾಕ್ ಸ್ಪಾಟ್ಗಳಲ್ಲೂ ಕನ್ನಡಿಗಳನ್ನು ಅಳವಡಿಸಲು ಪಾಲಿಕೆ ನಿರ್ಧರಿಸಿದೆ. ಈ ಮೂಲಕ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಮತ್ತೆ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ.