DAKSHINA KANNADA
ಅಪಘಾತದ ಸಂದರ್ಭ ಜೀವ ಉಳಿಸಲು ನನ್ನ ಪ್ರಥಮ ಆದ್ಯತೆ: ಚಾರ್ಮಾಡಿ ಹಸನಬ್ಬ
ಮಂಗಳೂರು, ನವೆಂಬರ್ 29: ಅಪಘಾತ ಆದಾಗ ಗಾಯಾಳುವಿನ ಜೀವ ಉಳಿಸಲು ನನ್ನ ಪ್ರಥಮ ಆದ್ಯತೆ. ಅದು ನನ್ನ ಮನಸ್ಸಿಗೆ ಸಾಮಾಧಾನ ನೀಡುವ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ನನ್ನಿಂದ ಆದ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಈ ಕಾರ್ಯವನ್ನು ನೆನಪಿಟ್ಟು ಮತ್ತೆ ಬಂದು ನನಗೆ ಕೃತಜ್ಞತೆ ಹೇಳುವಾಗ ನನ್ನ ಕಾರ್ಯ ಸಾರ್ಥಕ ಅನ್ನಿಸಿದೆ. ಅದು ನನಗೆ ದೊರಕಿದ ಬಹುದೊಡ್ಡ ಸನ್ಮಾನ. ಇದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಚಾರ್ಮಾಡಿ ಹಸನಬ್ಬ ಅವರ ಹೃದಯಾಂತರಾಳದ ಮಾತು.
ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಬುಧವಾರ ಆಯೋಜಿಸಲಾದ ‘ಪ್ರೆಸ್‌ಕ್ಲಬ್ ಗೌರವ ಅತಿಥಿ’ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ತಮ್ಮ ಅನಿಸಿಕೆ ಹಂಚಿಕೊಂಡರು. ಮನುಷ್ಯನಿಗೆ ಬೇಕಿರುವುದು ಮಾನವೀಯತೆ. ಎಲ್ಲೇ ಅಪಘಾತ ನಡೆಯಲಿ, ಕೂಡಲೇ ಧಾವಿಸಿ ಗಾಯಾಳುವನ್ನು ಉಪಚರಿಸಿ ಜೀವ ಉಳಿಸುವ ಮಾನವ ಧರ್ಮ ಎಲ್ಲರಲ್ಲೂ ಮೂಡಿಬರಬೇಕು. ಅಪಘಾತ ಸಂಭವಿಸಿದ ಸಂದರ್ಭ ಗಾಯಾಳುಗಳನ್ನು ಉಪಚರಿಸಿ ಪ್ರಾಣ ಉಳಿಸುವ ಕಾರ್ಯ ಮಾಡಬೇಕೇ ಹೊರತು ಫೋಟೋ ತೆಗೆಯುವುದು, ಜಗಳ ಮಾಡುತ್ತಾ ಕೂರುವುದು ಸರಿಯಲ್ಲ ಎಂದವರು ಅಭಿಪ್ರಾಯಿಸಿದರು.
ವಾಹನ ಅಪಘಾತಗಳು ನಡೆದ ಸಂದರ್ಭ ಅನಗತ್ಯ ತಕರಾರು ಮಾಡುತ್ತಾ ಕೂರಬಾರದು. ಸುಲಭದಲ್ಲಿ ಇತ್ಯರ್ಥಪಡಿಸಿ ಪರಿಹಾರ ಪಾವತಿಸಿ ನೆಮ್ಮದಿಯಾಗಿ ತೆರಳಿ. ಕೇಸು, ಪೊಲೀಸ್ ಠಾಣೆ ಮೆಟ್ಟಿಲು ಎಂದರೆ ವ್ಯರ್ಥ ಹಣ ಖರ್ಚು, ಕೇಸು ಇತ್ಯರ್ಥವಾಗುವಲ್ಲಿವರೆಗೆ ಕಾಯಬೇಕಾಗುತ್ತದೆ. ವಾಹನ ಅಪಘಾತವಾದ ಸಂದರ್ಭ ಎರಡೂ ಕಡೆಯವರಿಗೆ ನೈತಿಕ ಬೆಂಬಲ ನೀಡುವುದು ಮುಖ್ಯ. ಅದು ಬಿಟ್ಟು ದೂಷಿಸುತ್ತಾ, ಕೈಗೆ ಸಿಕ್ಕಿದ ವಸ್ತುಗಳನ್ನು ಕಬಳಿಸುವ ಕಾರ್ಯ ಯಾವತ್ತೂ ಮಾಡಬಾರದು ಎಂದು ಅವರು ತಿಳಿ ಹೇಳಿದರು.
ಚಾರ್ಮಾಡಿ ಘಾಟ್‌ನಲ್ಲಿ ಈಗ ರಸ್ತೆ ಅಗಲೀಕರಣ, ಅಭಿವೃದ್ಧಿಯಿಂದಾಗಿ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ತುರ್ತು ಸಂದರ್ಭಗಳಲ್ಲಿ ಮುಂಜಾಗ್ರತೆಗಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸಲು ನಿರ್ಧರಿಸಿದ್ದೇನೆ. ಇದು ಚಾರ್ಮಾಡಿಯ ಸುತ್ತಲಿನ 50 ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಸೇವೆ ನೀಡಲಿದೆ. ರಾಜ್ಯೋತ್ಸವ ಪುರಸ್ಕಾರದಲ್ಲಿ ಸರಕಾರ 5 ಲಕ್ಷ ರೂ. ಗೌರವ ಮೊತ್ತ ನೀಡಿದೆ. ಆ್ಯಂಬುಲೆನ್ಸ್‌ಗೆ 8 ಲಕ್ಷ ರೂ. ಬೇಕು. ಉಳಿದ ಹಣವನ್ನು ನಾವೇ ಕುಟುಂಬಸ್ಥರು ಟ್ರಸ್ಟ್ ಮಾಡಿಕೊಂಡು ಸಾಲದ ಮೂಲಕ ಭರಿಸುತ್ತೇವೆ. ನನ್ನ ಮೂವರು ಪುತ್ರರು ಇದರ ಜವಾಬ್ದಾರಿ ನಿರ್ವಹಿಸುತ್ತಾರೆ. ಬಳಿಕ ಕಂತು ಪಾವತಿಸಿ ಸಾಲ ತೀರಿಸುತ್ತೇವೆ. ಆ್ಯಂಬುಲೆನ್ಸ್ ಕೆಲವೇ ದಿನಗಳಲ್ಲಿ ಬರಲಿದೆ. ಪ್ರಸ್ತುತ ಟ್ರಸ್ಟ್‌ನ್ನು ನೋಂದಣಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.