ಮನ್ನಾರ್ ಮಾರ್ಚ್ 23: ಕೇರಳದ ಪ್ರಸಿದ್ಧ ಪ್ರವಾಸಿ ತಾಣ ಮನ್ನಾರ್-ಉದುಮಲ್ಪೇಟೆ ಅಂತರರಾಜ್ಯ ಹೆದ್ದಾರಿಯ ಥಲ್ಯಾರ್ ಬಳಿ ಕಾಡಾನೆಯೊಂದು ಭೀಕರ ದಾಳಿ ನಡೆಸಿದ್ದು, ಕರ್ನಾಟಕ ಮೂಲದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕರ್ನಾಟಕದಿಂದ ಮೂನ್ನಾರ್ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರ ಕಾರು ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ರಸ್ತೆಗೆ ಬಂದ ಕಾಡಾನೆಯು ಏಕಾಏಕಿ ಕಾರಿನ ಮೇಲೆ ದಾಳಿ ಮಾಡಿದೆ. ಆನೆಯು ಕಾರಿನ ಮುಂಭಾಗಕ್ಕೆ ಧಾವಿಸಿ ಹಾನಿ ಮಾಡುತ್ತಿದ್ದಂತೆ ಕಾರಿನಲ್ಲಿದ್ದವರು ದಿಗಿಲುಗೊಂಡಿದ್ದರು. ಈ ವೇಳೆ ರಸ್ತೆಯಲ್ಲಿದ್ದ ಇತರ ವಾಹನ ಸವಾರರು ಜೋರಾಗಿ ಕಿರುಚಾಡಿ, ಹಾರ್ನ್ ಮಾಡುವ ಮೂಲಕ ಆನೆಯ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದರು. ಆನೆಯು ಸ್ವಲ್ಪ ಹಿಂದೆ ಸರಿದ ಕ್ಷಣವನ್ನೇ ಬಳಸಿಕೊಂಡ ಚಾಲಕ, ತಕ್ಷಣವೇ ಕಾರನ್ನು ವೇಗವಾಗಿ ಮುಂದಕ್ಕೆ ಚಲಾಯಿಸುವ ಮೂಲಕ ಆನೆಯ ಹಿಡಿತದಿಂದ ಪಾರಾಗಿದ್ದಾರೆ. ದಾಳಿಯಿಂದ ಕಾರಿನ ಮುಂಭಾಗ ಜಖಂಗೊಂಡಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆಯು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ.