ಮುಂಬೈ, ಮಾರ್ಚ್ 10: ಗೆಳೆಯನ ನಿರಂತರ ಮಾನಸಿಕ ಕಿರುಕುಳಕ್ಕೆ ಬೇಸತ್ತು ದಂತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ Mumbaiನಲ್ಲಿ ನಡೆದಿದೆ.

ಮೃತಳನ್ನು ಸ್ತುತಿ ಸೋನ್ವಾನೆ (24) ಎಂದು ಗುರುತಿಸಲಾಗಿದೆ. ಇವರು ದಂತ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ (ಎಂಡಿಎಸ್) ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದರು ಎಂದು ತಿಳಿದುಬಂದಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸ್ತುತಿ ಒಬ್ಬ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಆದರೆ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಯುವಕ, “ನೀನು ಮೋಸ ಮಾಡಿದ್ದೀಯ” ಎಂಬ ಆರೋಪಗಳನ್ನು ಮಾಡುತ್ತಾ ಅವಮಾನಕಾರಿ ಹೇಳಿಕೆಗಳನ್ನು ನೀಡುತ್ತಿದ್ದನೆಂದು ತಿಳಿದುಬಂದಿದೆ. ಇದರಿಂದಾಗಿ ಆಕೆಗೆ ತೀವ್ರ ಮಾನಸಿಕ ಒತ್ತಡ ಉಂಟಾಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
6 ಪುಟಗಳ ಕಣ್ಣೀರಿನ ಕಥೆ: ಸೋಮವಾರ ಬೆಳಿಗ್ಗೆ ಸ್ತುತಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತನಿಖೆಯ ವೇಳೆ ಪೊಲೀಸರಿಗೆ 6 ಪುಟಗಳ ಸುದೀರ್ಘ ಆತ್ಮಹತ್ಯೆ ಪತ್ರ ಲಭ್ಯವಾಗಿದೆ. ಅದರಲ್ಲಿ ತನ್ನ ಗೆಳೆಯ ಫಜಲ್ ಖಾನ್ ನೀಡುತ್ತಿದ್ದ ಮಾನಸಿಕ ಕಿರುಕುಳ, ಪದೇ ಪದೇ ಮಾಡುತ್ತಿದ್ದ ಅವಮಾನ ಹಾಗೂ ಸಂಬಂಧದ ಹೆಸರಿನಲ್ಲಿ ಅನುಭವಿಸಿದ ಯಾತನೆಯನ್ನು ಸ್ತುತಿ ಎಳೆಎಳೆಯಾಗಿ ವಿವರಿಸಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಈ ಇಬ್ಬರೂ ಒಂದೂವರೆ ವರ್ಷಗಳಿಂದ ಸಂಬಂಧದಲ್ಲಿದ್ದರು.
‘ಫ್ರಿಡ್ಜ್’ ಹೇಳಿಕೆಯ ಭಯಾನಕ ತಮಾಷೆ: ಡೆತ್ ನೋಟ್ನಲ್ಲಿ ಸ್ತುತಿ ಉಲ್ಲೇಖಿಸಿರುವ ಒಂದು ಅಂಶ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸ್ತುತಿಯ ಗೆಳೆಯನ ವರ್ತನೆ ಕಂಡು ಆಕೆಯ ಸ್ನೇಹಿತರು ಆಗಾಗ್ಗೆ, “ನಿನ್ನನ್ನು ನಾವು ಫ್ರಿಡ್ಜ್ನಲ್ಲಿ ನೋಡಲು ಬಯಸುವುದಿಲ್ಲ” ಎಂದು ತಮಾಷೆ ಮಾಡುತ್ತಿದ್ದರಂತೆ. ದೆಹಲಿಯ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ನಂತರ ಇಂತಹ ಮಾತುಗಳು ಚಾಲ್ತಿಗೆ ಬಂದಿದ್ದು, ಸ್ನೇಹಿತರ ಈ ತಮಾಷೆಯ ಮಾತುಗಳು ಸ್ತುತಿ ಎದುರಿಸುತ್ತಿದ್ದ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತವೆ.
ಬಂಧನ ಮತ್ತು ತನಿಖೆ: ಮತ್ತೊಬ್ಬ ವ್ಯಕ್ತಿಯೊಂದಿಗೆ ಸ್ತುತಿ ಮಾತನಾಡಿದ್ದಕ್ಕೆ ಕೆರಳಿದ ಫಜಲ್ ಖಾನ್, ಆಕೆಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ಮಾನಸಿಕವಾಗಿ ಜರ್ಜರಿತಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೋಷಕರ ದೂರಿನ ಮೇರೆಗೆ ಆಂಟೋಪ್ ಹಿಲ್ ಪೊಲೀಸರು ಆರೋಪಿ ಫಜಲ್ ಖಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಲೋವರ್ ಪರೇಲ್ನಲ್ಲಿ ಆತನನ್ನು ಬಂಧಿಸಿದ್ದಾರೆ.