ಮುಂಬೈ ಜೂನ್ 30 : ಚೆಂಬೂರ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಶಾಲಾ ಮಕ್ಕಳಿದ್ದ ಬಸ್ ಮೇಲೆ ಭಾರಿ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ 11 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇತರ ಐದು ಮಂದಿ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಿಲಕ್ ನಗರದ ಯೂನಿವರ್ಸಲ್ ಶಾಲೆಗೆ ಸೇರಿದ ಬಸ್ 18 ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ಮಧ್ಯಾಹ್ನ 2:50 ರ ಸುಮಾರಿಗೆ ಚೆಂಬೂರ್ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮೃತ ದುರ್ದೈವಿ ವಿದ್ಯಾರ್ಥಿಯನ್ನು ವಿಹಾನ್ ಶ್ರೀವಾಸ್ತವ್ (11) ಎಂದು ಗುರುತಿಸಲಾಗಿದೆ. ಮರವು ಬಸ್ಸಿನ ಒಂದು ಭಾಗವನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡಿದ್ದರಿಂದ ಅದರೊಳಗೆ ಹಲವು ಮಕ್ಕಳು ಸಿಲುಕಿಕೊಂಡಿದ್ದರು. ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಬಸ್ ಕಂಡಕ್ಟರ್ ಮತ್ತು ಸ್ಥಳೀಯ ನಿವಾಸಿಗಳು ಸಮಯಪ್ರಜ್ಞೆ ಮೆರೆದು ಬಸ್ಸಿನ ಕಿಟಕಿಗಳ ಮೂಲಕ 12 ಮಕ್ಕಳನ್ನು ಸುರಕ್ಷಿತವಾಗಿ ಹೊರಕ್ಕೆ ಎಳೆದಿದ್ದಾರೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿಹಾನ್ ಶ್ರೀವಾಸ್ತವ್ನನ್ನು ಆಸ್ಪತ್ರೆಗೆ ತರುವ ಮುನ್ನವೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಾಯಗೊಂಡಿರುವ ಇತರ ಐದು ಮಂದಿ ವಿದ್ಯಾರ್ಥಿಗಳನ್ನು ತಕ್ಷಣವೇ ಹತ್ತಿರದ ಝೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಸಣ್ಣಪುಟ್ಟ ಗಾಯಗಳಾಗಿರುವ ನಾಲ್ವರು ಮಕ್ಕಳ ಸ್ಥಿತಿ ಸದ್ಯ ಸ್ಥಿರವಾಗಿದ್ದು, ಐದನೇ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದು ಆತನಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ವಲಯ 6 ರ ಡಿಸಿಪಿ ಸಮೀರ್ ಶೇಖ್ ತಿಳಿಸಿದ್ದಾರೆ.