ಬೆಳ್ತಂಗಡಿ, ಮಾರ್ಚ್ 25: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮುಲ್ಕಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಾಣಗೊಳ್ಳುತ್ತಿರುವ ‘ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ’ದ ಸುಸಜ್ಜಿತ ಹವಾನಿಯಂತ್ರಿತ ಸಭಾಭವನದ ಕಾಮಗಾರಿಗಾಗಿ ಪ್ರಸಿದ್ಧ ಉದ್ಯಮಿ, ಸಮಾಜ ಸೇವಕ ಶಶಿಧರ್ ಶೆಟ್ಟಿ ಬರೋಡ ಅವರು ರೂ. 1.25 ಕೋಟಿ ಬೃಹತ್ ದೇಣಿಗೆಯನ್ನು ನೀಡಿದ್ದಾರೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾನಿರ್ದೇಶಕರು ಹಾಗೂ ‘ಶಶಿ ಕೇಟರಿಂಗ್ ಸರ್ವಿಸಸ್’ ಸಂಸ್ಥೆಯ ಸಿ.ಎಂ.ಡಿ ಆಗಿರುವ ಶಶಿಧರ್ ಶೆಟ್ಟಿ ಅವರು, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸದಾ ಕೊಡುಗೈ ದಾನಿಯಾಗಿ ಗುರುತಿಸಿಕೊಂಡವರು. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಈ ಹವಾನಿಯಂತ್ರಿತ ಸಭಾಭವನದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಬರುವ ಡಿಸೆಂಬರ್ ತಿಂಗಳ ವೇಳೆಗೆ ಲೋಕಾರ್ಪಣೆಗೊಳಿಸಬೇಕು ಎಂಬ ಉದ್ದೇಶದಿಂದ ಅವರು ಈ ಆರ್ಥಿಕ ನೆರವು ಹಸ್ತ ಚಾಚಿದ್ದಾರೆ.
ಶಶಿಧರ್ ಶೆಟ್ಟಿ ಅವರು 2018 ರಿಂದಲೂ ಒಕ್ಕೂಟದ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಂಘಟನೆಯ ಹತ್ತಾರು ಜನಪರ ಯೋಜನೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ನಿರಂತರ ಸಹಕಾರ ಮತ್ತು ಸಮಾಜಮುಖಿ ಕಳಕಳಿಯ ಬಗ್ಗೆ ಸಂಘಟಕರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಭಾಭವನವು ಪೂರ್ಣಗೊಂಡಲ್ಲಿ ಕರಾವಳಿ ಭಾಗದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಅತ್ಯಾಧುನಿಕ ವೇದಿಕೆಯೊಂದು ಲಭ್ಯವಾಗಲಿದೆ.