ಹುಬ್ಬಳ್ಳಿ ಸೆಪ್ಟೆಂಬರ್ 24: ಭಾರೀ ವಿವಾದಕ್ಕೆ ಕಾರಣವಾಗಿರುವ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮತ್ತು ಗಾಯತ್ರಿ ನಡುವಿನ ಲವ್‌ಮ್ಯಾರೇಜ್ ಪ್ರಕರಣಕ್ಕೆ ಸಂಬಂಧ ಇದೀಗ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸಬ್‌ರಿಜಿಸ್ಟರ್ ಕಚೇರಿಯಲ್ಲಿ ಜೂನ್ 5ರಂದು ರಿಜಿಸ್ಟರ್ ಮದುವೆಯಾಗಿದ್ದರು. ಈ ಮದುವೆ ವಿವಾದಕ್ಕೆ ಗುರಿಯಾಗಿದೆ. ವಿಚಾರಣೆ ವೇಳೆ ಯುವತಿ ಗಾಯತ್ರಿ, ಮುಕಳೆಪ್ಪ ನನ್ನ ಕಿಡ್ನ್ಯಾಪ್ ಮಾಡಿಲ್ಲ. ಸ್ವಯಿಚ್ಛೆಯಿಂದ ಮದುವೆಯಾಗಿದ್ದೇನೆ ಅಂತಾ ಹೇಳಿದ್ದಳು. ಈಗ ಮುಕಳೆಪ್ಪ ಸ್ಪಷ್ಟನೆ ನೀಡಿದ್ದಾನೆ. ‘ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ನನ್ನ ಧರ್ಮವನ್ನು ನಾನ್ ಪಾಲಿಸುತ್ತೇನೆ. ನನ್ನ ಪತ್ನಿ ಅವಳ ಧರ್ಮವನ್ನು ಅವಳು ಪಾಲಿಸುತ್ತಾಳೆ’ ಎಂದು ಹೇಳಿದ್ದಾನೆ.
ವೀಡಿಯೋದಲ್ಲಿ ಮೊದಲು ಮಾತನಾಡಿದ ಮುಕಳೆಪ್ಪ, ಎಲ್ಲರೂ ಮುಕಳೆಪ್ಪ ಲವ್ ಜಿಹಾದ್ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ. ನಾವು ಇಬ್ಬರೂ ಮತಾಂತರಗೊಂಡಿಲ್ಲ. ನನ್ನ ಪತ್ನಿ ಯಾವ ಧರ್ಮದಲ್ಲಿ ಹುಟ್ಟಿದ್ದಾಳೆ, ಅದೇ ಧರ್ಮ ಪಾಲಿಸುತ್ತೇನೆ. ನಾನು ಹುಟ್ಟಿದ ಧರ್ಮವನ್ನೇ ನಾನು ಪಾಲಿಸುತ್ತೇನೆ. ಯಾವುದೇ ಮತಾಂತರ ಮಾಡಲ್ಲ. ಕಲಾವಿದರಲ್ಲಿ ಯಾವುದೇ ಜಾತಿ-ಧರ್ಮ ತರಬೇಡಿ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂದರೆ ನಾನು ಕೂಡ ಕನ್ನಡ ಹಿಂದೂನೇ. ನಮಗೆ ಯಾವುದೇ ಥರದ ಕಿರಿಕಿರಿ ಮಾಡೋದು ಮತ್ತು ನಮ್ಮ ಬಗ್ಗೆ ವೀಡಿಯೋ ಮಾಡಿ ಹಾಕೋದು ಮಾಡಬೇಡಿ. ನಮ್ಮನ್ನ ಬದುಕಲು ಬಿಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.
ವೀಡಿಯೋ ಬಿಡುಗಡೆ ಮಾಡಿರುವ ಮುಕಳೆಪ್ಪ ಮತ್ತು ಆತನ ಪತ್ಮಿ ಗಾಯತ್ರಿ, ನಮ್ಮನ್ನ ಬದುಕಲು ಬಿಡಿ ಎಂದು ಕೇಳಿಕೊಂಡಿದ್ದಾರೆ. ಅದೇ ವೇಳೆ ಮುಕಳೆಪ್ಪ ಪತ್ನಿ ಕೂಡ ಮಾತನಾಡಿ, ನಾನು ಯಾವತ್ತೂ ಹಿಂದೂ ಆಗಿಯೇ ಇದ್ದೇನೆ. ನನ್ನ ಪತಿ ನನ್ನನ್ನು ಮಾತಾಂತರ ಮಾಡಿದ್ದಾರೆ ಎನ್ನುವುದೆಲ್ಲ ಸುಳ್ಳು. ಇದನ್ನ ಯಾರೂ ನಂಬಬೇಡಿ. ಮುಕಳೆಪ್ಪನನ್ನ ಇಷ್ಟು ದಿನ ಹೇಗೆ ನೋಡಿದ್ದೀರೋ ಅದೇ ರೀತಿ ನೋಡ್ರಿ. ಕೈಮುಗಿದು ಕೇಳ್ತೇನೆ. ನಮ್ಮನ್ನ ಬದುಕಲು ಬಿಡಿ ಎಂದ ಗಾಯತ್ರಿ ಹೇಳಿದ್ದಾರೆ.



