ಕರಾವಳಿ ಉತ್ಸವ ಕಾರ್ಯಕ್ರಮ ಉದ್ಘಾಟನೆಗೆ ತಟ್ಟಿದ MRPL ವಿರೋಧಿ ಹೋರಾಟ ಪ್ರತಿಭಟನೆ

ಮಂಗಳೂರು ಡಿಸೆಂಬರ್ 22: ದಕ್ಷಿಣಕನ್ನಡ ಜಿಲ್ಲಾಡಳಿತ ಆಯೋಜಿಸಿದ್ದ ಕರಾವಳಿ ಉತ್ಸವ ಉದ್ಘಾಟನೆ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಎಂಆರ್ ಪಿಎಲ್ ವಿರೋಧಿ ಹೋರಾಟಗಾರರ ಪ್ರತಿಭಟನೆಯ ಬಿಸಿ ತಟ್ಟಿದೆ.

ದಕ್ಷಿಣಕನ್ನಡ ಜಿಲ್ಲಾಡಳಿತ ವತಿಯಿಂದ ಡಿಸೆಂಬರ್ 30 ತನಕ ಮಂಗಳೂರು ನಗರ ಹಾಗೂ ಪಣಂಬೂರು ಕಡಲ ತೀರದಲ್ಲಿ ಆಯೋಜಿಸಿರುವ ಕರಾವಳಿ ಉತ್ಸವವನ್ನು ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.

ಕರಾವಳಿ ಉತ್ಸವ ಉದ್ಘಾಟನೆ ಸಭಾ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ದಿಢೀರ್ ಪ್ರತ್ಯಕ್ಷರಾದ ಎಂಆರ್‌ಪಿಎಲ್ ವಿಸ್ತರಣೆ ವಿರೋಧಿ ಹೋರಾಟಗಾರರು ವೇದಿಕೆ ಏರಿ ಪ್ರೇಕ್ಷಕರಿಗೆ ಮುಖ ಮಾಡಿ ನಿಂತು ‘ಕರಾವಳಿ ಉಳಿಸಿ ಎಂಆರ್‌ಪಿಎಲ್ ವಿಸ್ತರಣೆ ನಿಲ್ಲಿಸಿ’ ಎನ್ನುವ ಬ್ಯಾನರ್ ಪ್ರದರ್ಶಿಸಿದರು.

ಬಳಿಕ ಸಚಿವ ಖಾದರ್ ಹೋರಾಟಗಾರರನ್ನು ಸಮಾಧಾನಪಡಿಸಿ ವೇದಿಕೆ ಬದಿಗೆ ಕಳುಹಿಸಿದರು. ಸಚಿವರು ಭಾಷಣ ನಡೆಸಿ ಮುಗಿಸಿದಾಗ ನಮಗೆ ಉತ್ತರಿಸುವಂತೆ ಹೋರಾಟಗಾರರ ನೇತೃತ್ವ ವಹಿಸಿದ್ದ ವಿದ್ಯಾ ದಿನಕರ್ ಕೂಗಿದರು.

ಬಳಿಕ ಈ ಬಗ್ಗೆ ಮಾತನಾಡುವೆ ಎಂದು ಸಚಿವರು ಪ್ರತಿಕ್ರಿಯಿಸಿದರು. ಸಮಾಧಾನಪಡದೆ ಮತ್ತೆ ಹೋರಾಟದ ಕೂಗು ಹಾಕಿದ ಪ್ರತಿಭಟನಕಾರರರನ್ನು ಪೊಲೀಸರು ಹೊರಗೆ ಕರೆದೊಯ್ದರು.

ಸಭಾ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಯು.ಟಿ ಖಾದರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮೀಷನರ್ ಇದ್ದರೂ ಪೊಲೀಸರು ಪ್ರತಿಭಟನಾಕಾರರು ವೇದಿಕೆ ಏರುವರೆಗೂ ಮೂಕ ಪ್ರೇಕ್ಷಕರಂತೆ ಇದ್ದಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

VIDEO

Facebook Comments

comments