ಉಡುಪಿ ಜೂನ್ 30: “ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ನಾವು ನೀವು ಹುಟ್ಟುವ ಮುನ್ನವೇ, ಅಂದರೆ ಒಂದು ಶತಮಾನದ ಹಿಂದೆಯೇ ಅಸ್ತಿತ್ವಕ್ಕೆ ಬಂದಿದೆ. ಕೇವಲ ಜನಪರ ಮತ್ತು ರಾಷ್ಟ್ರಪ್ರೇಮದ ಪ್ರತೀಕವಾಗಿ ಕೆಲಸ ಮಾಡುವ ಈ ಸಂಘಟನೆಯ ನೋಂದಣಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಲೆಬಿಸಿ ಬೇಡ” ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ನೋಂದಣಿ ವಿಚಾರ ಹಾಗೂ ಅಯೋಧ್ಯೆ ರಾಮಮಂದಿರದ ಹುಂಡಿ ಹಗರಣದ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮಮಂದಿರ ಹಗರಣ ದೇಶಕ್ಕೆ, ಬಿಜೆಪಿಗೆ ನೋವು ತಂದಿದೆ:
ಇದೇ ವೇಳೆ ಅಯೋಧ್ಯೆ ರಾಮಮಂದಿರದ ಹುಂಡಿ ಹಣ ದುರುಪಯೋಗ ಹಗರಣದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೋಟ, “ಈ ವಿಚಾರದಲ್ಲಿ ಯಾರೂ ಕೂಡ ಮೌನವಾಗಿ ಕುಳಿತಿಲ್ಲ. ರಾಮಮಂದಿರವು ಕೋಟ್ಯಂತರ ಹಿಂದೂಗಳ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಶ್ರದ್ಧಾಕೇಂದ್ರವಾಗಿದೆ. ಇದು ಆರ್ಥಿಕ ಶಕ್ತಿಯೂ ಹರಿದು ಬರುವ ಸ್ಥಳವಾಗಿದೆ. ಅಲ್ಲಿ ನಡೆದಿರುವ ಘಟನೆಯು ಇಡೀ ದೇಶಕ್ಕೆ, ಭಾರತೀಯ ಜನತಾ ಪಾರ್ಟಿಗೆ ಹಾಗೂ ಸಂಘ ಪರಿವಾರಕ್ಕೂ ತೀವ್ರ ನೋವುಂಟು ಮಾಡಿದೆ. ಆದರೆ, ಈ ವಿಷಯದಲ್ಲಿ ತಕ್ಷಣವೇ ಆರೋಪಿಗಳ ಬಂಧನ ಪ್ರಕ್ರಿಯೆಯೂ ನಡೆದಿದೆ. ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆಯಾಗಲಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ” ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಆರ್ಎಸ್ಎಸ್ ನೋಂದಣಿ ಹೇಳಿಕೆಯನ್ನು ಲೇವಡಿ ಮಾಡಿದ ಸಂಸದರು, “ಸಂಘಟನೆಯ ನೋಂದಣಿ ಪ್ರಿಯಾಂಕ್ ಖರ್ಗೆ ಅವರ ಕಾಲದಲ್ಲೇ ಆಗಬೇಕೆಂದು ಎಲ್ಲಾದರೂ ಶಾಸನ ಅಥವಾ ಕಾನೂನು ಇದೆಯಾ? ಆರ್ಎಸ್ಎಸ್ ಎನ್ನುವುದು ಜಾತಿ, ಧರ್ಮಗಳಿಗಿಂತ ಮಿಗಿಲಾಗಿ ‘ದೇಶ ಮೊದಲು’ ಎನ್ನುವ ತತ್ವದಡಿ ಕೆಲಸ ಮಾಡುವ ರಾಷ್ಟ್ರಭಕ್ತರ ಸಂಘಟನೆಯಾಗಿದೆ. ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸ್ವಯಂಸೇವಕರು ಸಮವಸ್ತ್ರ ಸಹಿತ ಭಾಗವಹಿಸಿದಾಗ ಖುದ್ದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಇತಿಹಾಸವನ್ನು ಪ್ರಿಯಾಂಕ್ ಖರ್ಗೆ ಅವರು ಮರೆತಿದ್ದಾರೆ, ಅದಕ್ಕೆ ನಾವೇನು ಮಾಡಲು ಸಾಧ್ಯ? ನೋಂದಣಿ ಮಾಡಿಕೊಳ್ಳುವವರು ಮಾಡಿಕೊಳ್ಳುತ್ತಾರೆ, ಅದರ ಬಗ್ಗೆ ಇವರಿಗೆ ಚಿಂತೆ ಬೇಡ” ಎಂದರು.