ಬೆಂಗಳೂರು ಅಕ್ಟೋಬರ್ 31: ಬೆಂಗಳೂರಿನಲ್ಲಿ ನಡೆದ ಮಹಿಳೆಯೊಬ್ಬರ ಅಸಹಜ ಸಾವು ಪ್ರಕರಣದಲ್ಲಿ ಸ್ಪೋಟಕ ತಿರುವು ಸಿಕ್ಕಿದ್ದು, ಸಾವನಪ್ಪಿದ ಮಹಿಳೆಯ ಅಪ್ರಾಪ್ತ ಮಗಳೆ ತನ್ನ ಅಪ್ರಾಪ್ತ ಸ್ನೇಹಿತರ ಜೊತೆ ಸೇರಿ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ. ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆಯನ್ನು ನೇತ್ರಾವತಿ ಎಂದು ಗುರುತಿಸಲಾಗಿದೆ.

ನೇತ್ರಾವತಿಯ ಮಗಳು ಸೇರಿದಂತೆ ಐವರು ಅಪ್ರಾಪ್ತರನ್ನು ಬಂಧಿಸಿರುವುದಾಗಿ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 25ರಂದು ರಾತ್ರಿ ನೇತ್ರಾವತಿ ಅವರು ಮಲಗಿದ್ದಾಗ ಆಕೆಗೆ ತಿಳಿಯದಂತೆ ತನ್ನ ನಾಲ್ವರು ಅಪ್ರಾಪ್ತ ಸ್ನೇಹಿತರನ್ನು ಬಾಲಕಿ ಮನೆಗೆ ಕರೆದುಕೊಂಡು ಬಂದಿದ್ದಳು. ಎಚ್ಚರಗೊಂಡ ನೇತ್ರಾವತಿ, ಮಗಳು ಮತ್ತು ಆಕೆಯ ಸ್ನೇಹಿತರ ವರ್ತನೆ ನೋಡಿ ಆಕ್ರೋಶಗೊಂಡು ಬೈದಿದ್ದರು. ಈ ವೇಳೆ ಜಗಳ ತೀವ್ರಗೊಂಡಾಗ ಬಾಲಕಿ ಹಾಗೂ ಆಕೆಯ ಸ್ನೇಹಿತರು ನೇತ್ರಾವತಿಯ ಬಾಯಿ ಮುಚ್ಚಿ ಟವಲ್ನಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದರು. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನ್ಗೆ ನೇತು ಹಾಕಿ ಮನೆ ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಕೊಲೆ ನಡೆದ ಮಾರನೇ ದಿನ ನೇತ್ರಾವತಿ ಶವ ಪತ್ತೆಯಾದ ಬಳಿಕ ಸುಬ್ರಹ್ಮಣ್ಯಪುರ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದರು. ಆದರೆ ತಾಯಿಯ ಶವ ಸಂಸ್ಕಾರಕ್ಕೂ ಮಗಳು ಬಾರದೇ ಇದ್ದಾಗ ಅನುಮಾನ ವ್ಯಕ್ತಪಡಿಸಿದ್ದ ನೇತ್ರಾವತಿ ಅವರ ಸಹೋದರಿ ಅನಿತಾ, ತನ್ನ ಸಹೋದರಿಯ ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಅಕ್ಟೋಬರ್ 30ರಂದು ಮನೆಗೆ ಬಂದಿದ್ದ ಬಾಲಕಿಯನ್ನು ವಿಚಾರಣೆ ನಡೆಸಿದಾಗ ಹತ್ಯೆಯ ವೃತ್ತಾಂತ ಬಯಲಾಗಿದೆ. ಸದ್ಯ ಐವರನ್ನೂ ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read More- ಶುಕ್ರವಾರ ಜನಿಸಿದವರ ಅಸಲಿ ವ್ಯಕ್ತಿತ್ವ ಹೇಗಿರುತ್ತಂತೆ ಗೊತ್ತಾ? ಇಲ್ಲಿದೆ ಮಾಹಿತಿ..