ವಿಜಯಪುರ,ಮಾರ್ಚ್ 27: ತಾಯಿಯೊಬ್ಬಳು ತನ್ನ ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಮಾರ್ಚ್ 26 ರಂದು ನಡೆದಿದೆ.

ಪತಿ ಊರಲ್ಲಿಲ್ಲದ ವೇಳೆ ರಾಜಶ್ರೀ ಶಂಕ್ರಪ್ಪ ಹಳ್ಳೂರ (28) ಎಂಬ ಮಹಿಳೆ ತನ್ನ ಮೂವರು ಪುಟ್ಟ ಮಕ್ಕಳಾದ ಅನುಶ್ರೀ (6), ತನು (3) ಮತ್ತು ಕೇವಲ ಒಂದು ವರ್ಷದ ಹಸುಳೆ ಸಂತೋಷ್ ನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುರುವಾರ ಸಂಜೆಯ ವೇಳೆಗೆ ಈ ಕೃತ್ಯ ನಡೆದಿದ್ದು, ಮೊದಲು ಮಕ್ಕಳನ್ನು ಬಾವಿಗೆ ಎಸೆದ ರಾಜಶ್ರೀ, ನಂತರ ತಾನೂ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.
ರಾಜಶ್ರೀ ಅವರ ಪತಿ ಶಂಕ್ರಪ್ಪ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ವೃತ್ತಿ ನಿಮಿತ್ತ ಅವರು ಊರಿನಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದೆ. ಸಂಜೆ ಮನೆಗೆ ಬಂದಾಗ ಅಥವಾ ಅಕ್ಕಪಕ್ಕದವರು ಗಮನಿಸಿದಾಗ ಈ ಭೀಕರ ದೃಶ್ಯ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮೂರು ಮಕ್ಕಳೊಂದಿಗೆ ಈಕೆ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಕುಟುಂಬದಲ್ಲಿ ಕಲಹವಿತ್ತೇ ಅಥವಾ ಬೇರೆ ಯಾವುದಾದರೂ ಮಾನಸಿಕ ಒತ್ತಡವಿತ್ತೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಈ ಬಗ್ಗೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.