ನವದೆಹಲಿ,ಏಪ್ರಿಲ್ 20: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಪಹಲ್ಗಾಮ್ ದಾಳಿ ಹಾಗೂ ರಿಯಾಸಿ ಯಾತ್ರಿಕರ ಬಸ್ ಮೇಲಿನ ಗುಂಡಿನ ದಾಳಿ ಸೇರಿದಂತೆ ಹಲವು ಸರಣಿ ಭಯೋತ್ಪಾದನಾ ಕೃತ್ಯಗಳ ಮಾಸ್ಟರ್ಮೈಂಡ್, ಲಷ್ಕರ್-ಎ-ತೈಬಾ (LeT) ಸಂಘಟನೆಯ ಮೋಸ್ಟ್ ವಾಂಟೆಡ್ ಕಮಾಂಡರ್ ಹಬೀಬುಲ್ಲಾ ಅಲಿಯಾಸ್ ಸೈಫುಲ್ಲಾ ಸಾಜಿದ್ ಜಾಟ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ರಾಜಾರೋಷವಾಗಿ ತಿರುಗಾಡುತ್ತಿರುವುದು ಪತ್ತೆಯಾಗಿದೆ. ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯಕ್ಕೆ ಸಲ್ಲಿಸಿರುವ 1,597 ಪುಟಗಳ ಬೃಹತ್ ದೋಷಾರೋಪ ಪಟ್ಟಿಯಲ್ಲಿ ಆಘಾತಕಾರಿ ಸತ್ಯಗಳು ಹೊರಬಂದಿವೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಸೂರ್ ಜಿಲ್ಲೆಯವನಾದ ಈ ಹಬೀಬುಲ್ಲಾ, ಎರಡು ದಶಕಗಳ ಹಿಂದೆ ಭಾರತದೊಳಗೆ ನುಸುಳಿ ಕಾಶ್ಮೀರದಲ್ಲಿ ‘ಸಲೀಂ ಲ್ಯಾಂಗ್ಡಾ’ ಎಂಬ ಹೆಸರಿನಲ್ಲಿ ಅಡಗಿದ್ದ. ವಿಶೇಷವೆಂದರೆ, 2005 ರಿಂದ 2007ರ ಅವಧಿಯಲ್ಲಿ ಕುಲ್ಗಾಮ್ ಜಿಲ್ಲೆಯ ಯಾರಿಪೋರಾದಲ್ಲಿ ನೆಲೆಯೂರಿದ್ದ ಈತ, ಅಲ್ಲಿನ ಸ್ಥಳೀಯ ಮಹಿಳೆಯನ್ನೇ ವಿವಾಹವಾಗಿ ಅಳಿಯನ ಸೋಗಿನಲ್ಲಿ ಭಯೋತ್ಪಾದನಾ ಜಾಲವನ್ನು ವಿಸ್ತರಿಸಿದ್ದ. 2007ರಲ್ಲಿ ತನ್ನ ಪತ್ನಿಯೊಂದಿಗೆ ಪಾಕಿಸ್ತಾನಕ್ಕೆ ವಾಪಸ್ಸಾದ ಈತ, ಸದ್ಯ ಇಸ್ಲಾಮಾಬಾದ್ನಲ್ಲಿ ಡೈರಿ ಉದ್ಯಮದ ಮರೆಯಲ್ಲಿ ಉಗ್ರರಿಗೆ ಅತ್ಯಾಧುನಿಕ ತರಬೇತಿ ನೀಡುತ್ತಿದ್ದಾನೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಭಾರತದ ವಿರುದ್ಧ ಯುದ್ಧ ಸಾರಿದ ಗಂಭೀರ ಆರೋಪ ಹೊತ್ತಿರುವ ಈತ, ಲಷ್ಕರ್ನ ಉನ್ನತ ನಾಯಕ ಝಕಿ-ಉರ್-ರೆಹಮಾನ್ ಲಖ್ವಿಯ ನಿಕಟವರ್ತಿಯಾಗಿದ್ದಾನೆ. 2012ರಲ್ಲಿ ಈತನಿಗೆ ಜಮ್ಮು ಮತ್ತು ಕಾಶ್ಮೀರದ ಕಾರ್ಯಾಚರಣೆಗಳ ಸಂಪೂರ್ಣ ಜವಾಬ್ದಾರಿ ನೀಡಲಾಗಿತ್ತು. 2013ರ ಹೈದರ್ಪೋರಾ ಸೇನಾ ದಾಳಿ ಮತ್ತು ಜೂನ್ 9, 2024ರಂದು 9 ಮಂದಿ ಹಿಂದೂ ಯಾತ್ರಿಕರನ್ನು ಬಲಿಪಡೆದ ರಿಯಾಸಿ ಬಸ್ ದಾಳಿಯ ಹಿಂದೆ ಈತನ ನೇರ ಸಂಚಿದೆ ಎಂದು ಎನ್ಐಎ ದಾಖಲಿಸಿದೆ. ಪ್ರಸ್ತುತ ಈತ ‘ದ ರೆಸಿಸ್ಟೆನ್ಸ್ ಫ್ರಂಟ್’ (TRF) ಎಂಬ ಸಂಘಟನೆಯ ಮೂಲಕ ಗಡಿಯಾಚೆ ಕುಳಿತು ಡಿಜಿಟಲ್ ಮಾಧ್ಯಮಗಳ ಮೂಲಕ ಕಾಶ್ಮೀರದ ಯುವಕರನ್ನು ಹಾದಿ ತಪ್ಪಿಸುತ್ತಿದ್ದಾನೆ.
ಸೈಫುಲ್ಲಾ ಜಾಟ್ ಕೇವಲ ಲಷ್ಕರ್ ಮಾತ್ರವಲ್ಲದೆ, ಜೈಶ್-ಎ-ಮೊಹಮ್ಮದ್ ಮತ್ತು ಹಮಾಸ್ನಂತಹ ಅಂತರಾಷ್ಟ್ರೀಯ ಉಗ್ರ ಸಂಘಟನೆಗಳ ಹ್ಯಾಂಡ್ಲರ್ಗಳೊಂದಿಗೂ ನಿರಂತರ ಸಂಪರ್ಕದಲ್ಲಿರುವುದು ಭದ್ರತಾ ಸಂಸ್ಥೆಗಳ ಆತಂಕಕ್ಕೆ ಕಾರಣವಾಗಿದೆ.