ಮಂಗಳೂರು ಫೆಬ್ರವರಿ 26: ರೈಲ್ವೆ ಹಳಿ ಬಳಿ ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದ ಅಪ್ರಾಪ್ತ ಬಾಲಕನ ವಿಡಿಯೋ ಮಾಡಿ ಬಳಿಕ ಅವನ ಮೇಲೆ ಹಲ್ಲೆ ನಡೆಸಿ ಅನೈತಿಕ ಪೊಲೀಸ್ ಗಿರಿ ತೋರಿಸಿದ ಅಪ್ಪ ಮತ್ತು ಮಗನ ಮೇಲೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಂಡೇಶ್ವರ ಠಾಣೆ ವ್ಯಾಪ್ತಿಯ ಅತ್ತಾವರದ ನಿವಾಸಿಗಳಾದ ಸ್ಟೀವನ್ ಮೊಂತೇರೊ ಮತ್ತು ಆತನ ಮಗ ಅವಿಲ್ ಮೇಲೆ ಪ್ರಕರಣ ದಾಖಲಾಗಿದೆ. ಫೆಬ್ರವರಿ 23ರಂದು ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳು ರೈಲ್ವೇ ಟ್ರಾಕ್ ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸ್ಟೀವನ್ ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಿಸಿದ್ದು,
ವಿಡಿಯೋ ಮಾಡುತ್ತ ಹುಡುಗಿಯನ್ನು ನೀನ್ಯಾರು, ಎಲ್ಲಿ ಓಡುತ್ತೀಯಾ, ಇಲ್ಲೇನು ಮಾಡ್ತಿದೀರಿ ಎಂದು ಜೋರು ಮಾಡಿದ್ದಾರೆ. ಅಲ್ಲದೆ, ಹುಡುಗನನ್ನು ಇಲ್ಲಿ ಕುಳಿತು ಏನು ಮಾಡ್ತಿದೀಯಾ, ನಾನು ವಿಡಿಯೋ ಮಾಡಿದ್ದೇನೆ, ಫೇಸ್ಬುಕ್ ಹಾಕುತ್ತೇನೆ ಎನ್ನುತ್ತ ಆತನಿಗೆ ಎರಡೇಟು ಕೊಟ್ಟು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ತಂದೆ-ಮಗ ಇಬ್ಬರು ಸೇರಿ ಹುಡುಗನನ್ನು ಎಳಕೊಂಡು ಹೋಗಿದ್ದಾರೆ. ವಿಡಿಯೋವನ್ನು ಸ್ಟೀವನ್ ತನ್ನ ಫೇಸ್ಬುಕ್ ನಲ್ಲಿ ಷೇರ್ ಮಾಡಿ ತನ್ನದೂ ಸೆಲ್ಫಿ ತೋರಿಸಿದ್ದಾನೆ
ಬಾಲಕ ಹಾಗೂ ಆತನ ಸ್ನೇಹಿತೆ ಅಲ್ಲಿಂದ ಹೊರಡುತ್ತಿದ್ದಾಗ ತಡೆದ ಆರೋಪಿಗಳು, ಬಾಲಕನನ್ನು ಪಕ್ಕದ ರಸ್ತೆಗೆ ಎಳೆದೊಯ್ದು ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮಾನಹಾನಿ ಮಾಡಲಾಗಿದೆ ಎಂದು ಬಾಲಕನ ತಂದೆ ಅವರು ನೀಡಿದ ದೂರಿನನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.