ಮಂಗಳೂರು ಮಾರ್ಚ್ 17: ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಮಹಿಳೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಅವರ ಸ್ವಂತ ಸಹೋದರಿ ಪ್ರಪುಲ್ಲಾ ನಾಯಕ್ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಕೌಟುಂಬಿಕ ಕಲಹದ ಬಗ್ಗೆ ಮೂಡುಬಿದ್ರೆ ಠಾಣೆಗೆ ದೂರು ನೀಡಿದ್ದಾಗ, ನನ್ನ ಗಂಡನ ಪರವಾಗಿ ಅವಳು ಠಾಣೆಗೆ ಬಂದಿದ್ದಳು. ಠಾಣೆಯಲ್ಲಿ ಬೊಬ್ಬೆ ಹಾಕಿ ಮಾತನಾಡಿದ್ದಕ್ಕೆ ಇನ್ಸ್ ಪೆಕ್ಟರ್ ಬೈದಿದ್ದು, ಈ ವೇಳೆ ಅವಳ ಮಗ ವಿಡಿಯೋ ಮಾಡಿದ್ದಕ್ಕೆ ಜೋರು ಮಾಡಿದ್ದರು. ಆನಂತರ, ಆಕೆಯ ಮಗ ನನಗೆ ಹೊಡೆಯಲು ಬರುವಾಗ ಇನ್ಸ್ ಪೆಕ್ಟರ್ ಸಂದೇಶ್ ಆತನಿಗೆ ಎರಡೇಟು ಬಿಗಿದು ಠಾಣೆಯೊಳಗೆ ಕೂರಿಸಿದ್ದರು.
ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಕೆಲಸದಿಂದ ತೆಗೆಸಲೇಬೇಕು ಎಂದು ಶಪಥ ಮಾಡಿರುವ ಆಕೆ, ಈ ಸುಳ್ಳು ಕಥೆಯನ್ನು ಸೃಷ್ಟಿಸಿದ್ದಾಳೆ. ಅವಳ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದು, ಹಣದ ಆಮಿಷವೊಡ್ಡಿ ಅಧಿಕಾರಿಗಳ ವಿರುದ್ಧ ದೂರು ಕೊಡಿಸುತ್ತಿದ್ದಾಳೆ” ಎಂದು ಪ್ರಪುಲ್ಲಾ ಗಂಭೀರವಾಗಿ ಆರೋಪಿಸಿದ್ದಾರೆ.

ಆಕೆಗೆ ಮದುವೆಯಾಗಿ ಗಂಡ ತೀರಿ ಹೋಗಿದ್ದಾನೆ, 17 ವರ್ಷದ ಮಗ ಇದ್ದಾನೆ. ಇದಲ್ಲದೆ, ನನ್ನ ಮಗನನ್ನೂ ಆಕೆಯ ಜೊತೆಗೆ ಇರಿಸಿಕೊಂಡಿದ್ದಾಳೆ. ಏನೂ ಕೆಲಸ ಇಲ್ಲದಿದ್ದರೂ ಬೆಂಗಳೂರಿನಲ್ಲಿದ್ದು ಸಾಕಷ್ಟು ಹಣ ಮಾಡಿದ್ದಾಳೆ. ಹಣದ ದರ್ಪದಲ್ಲಿ ನನ್ನ ಕುಟುಂಬವನ್ನೂ ಹಾಳು ಮಾಡಿದ್ದಾಳೆ. ನನ್ನ ಗಂಡನೂ ಮೂರು ತಿಂಗಳು ಆಕೆಯ ಜೊತೆಗಿದ್ದು ಅವಳ ಅನಾಚಾರ ತಿಳಿದು ಮತ್ತೆ ಬಂದಿದ್ದಾರೆ. ಸಂದೇಶ್ ಒಳ್ಳೆಯವರಾಗಿದ್ದು ನನ್ನ ಕುಟುಂಬದ ವಿಷಯದಲ್ಲಿ ಅವಳು ಬಂದಿದ್ದು ಯಾಕೆಂದು ಬೈದಿದ್ದು ತಪ್ಪಾ ಎಂದು ಪ್ರಶ್ನಿಸಿದರು.
“ನನ್ನ ತಾಯಿಯನ್ನು ನೋಡಲು ಹೋದ ನನ್ನ ಗಂಡ ಮತ್ತು ಮಗನನ್ನು ಸುಮತಿ ವಾಪಸ್ ಬರಲು ಬಿಡಲಿಲ್ಲ. ಆ ಕಾರಣಕ್ಕೆ ನನ್ನ ಕುಟುಂಬವನ್ನು ಮರಳಿ ಪಡೆಯಲು ನಾನು ಪೊಲೀಸ್ ದೂರು ನೀಡಿದ್ದೆ. ಇನ್ಸ್ಪೆಕ್ಟರ್ ಸಂದೇಶ್ ಅವರು ಸ್ಟೇಷನ್ನಲ್ಲಿ ಮಾತ್ರ ಪರಿಚಯವಾಗಿದ್ದೇ ಹೊರತು ಬೇರೆ ಯಾವುದೇ ಸಂಬಂಧವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುಮತಿ ಇತರ ಮಹಿಳೆಯರಿಗೆ ಹಣ ನೀಡಿ ಅಧಿಕಾರಿಗಳ ವಿರುದ್ಧ ಸುಳ್ಳು ಹೇಳಿಕೆಗಳನ್ನು ಕೊಡಿಸುತ್ತಿದ್ದಾಳೆ. ಅವಳು ಹೋದಲ್ಲೆಲ್ಲಾ ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ದೂರು ನೀಡುವುದನ್ನೇ ಚಟ ಮಾಡಿಕೊಂಡಿದ್ದಾಳೆ ಎಂದು ಸಹೋದರಿ ಕಿಡಿಕಾರಿದ್ದಾರೆ.