ಮಂಗಳೂರು ಮಾರ್ಚ್ 20: ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳ ಬೆನ್ನಲ್ಲೇ ಇದೀಗ ಕಾರ್ಕಳ ಸುಮತಿ ನಾಯಕ್ ಎಂಬ ಮಹಿಳೆ ಪತ್ರಿಕಾಗೋಷ್ಠಿ ನಡೆಸಿದ ಸಂದೇಶ್ ವಿರುದ್ದ ಆರೋಪಗಳ ಸುರಿಮಳೆ ಮಾಡಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರು ನನಗೆ, ನನ್ನ ಅಕ್ಕನ ಮಗ ಹಾಗೂ ನನ್ನ ಮಗನಿಗೆ ಮಾನಸಿಕ ಹಿಂಸೆ, ಜೀವಹಾನಿ ಬೆದರಿಕೆ, ಮಾನ ಹಾನಿ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಸದ್ಯ ಅಮಾನತ್ತಿನಲ್ಲಿರುವ ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಕಾರ್ಕಳದ ಸುಮತಿ ನಾಯಕ್ ಒತ್ತಾಯಿಸಿದ್ದಾರೆ.
ಇನ್ಸ್ಪೆಕ್ಟರ್ ಸಂದೇಶ್ ಸೇರಿದಂತೆ ಮೂವರು ಅಧಿಕಾರಿಗಳ ನಡುವೆ ಒಂದು ದೊಡ್ಡ ‘ಚೈನ್ ಲಿಂಕ್’ ಇದೆ. ಒಬ್ಬರು ಇನ್ನೊಬ್ಬರನ್ನು ರಕ್ಷಿಸುತ್ತಿದ್ದಾರೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಐಜಿಪಿ ಅಮಿತ್ ಸಿಂಗ್ ಅಥವಾ ದಕ್ಷಿಣ ಕನ್ನಡ ಎಸ್ಪಿ ಡಾ. ಅರುಣ್ ಅವರ ನೇತೃತ್ವದಲ್ಲಿ ನಡೆಸಬೇಕು’ ಎಂದು ಡಿಜಿ ಸಲೀಂ ಅವರಿಗೆ ಮನವಿ ಮಾಡಿದ್ದಾರೆ.

‘ನನ್ನ ಬಳಿ ಸಾಕಷ್ಟು ಸಾಕ್ಷಿಗಳಿವೆ. ಪೊಲೀಸ್ ಕಮಿಷನರ್ ಅವರಿಗೆ ಲ್ಯಾಪ್ಟಾಪ್ನಲ್ಲಿ ಎಲ್ಲಾ ವಿಡಿಯೋ ಮತ್ತು ಪುರಾವೆಗಳನ್ನು ತೋರಿಸಿದ್ದೇನೆ. ಅದನ್ನು ಅವರು ಕಣ್ಣಾರೆ ಕಂಡಿದ್ದಾರೆ. ಮೂಡಬಿದ್ರೆ ಠಾಣೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯ ಹೊರಬರುತ್ತದೆ. ಇನ್ಸ್ಪೆಕ್ಟರ್ ಸಂದೇಶ್ ಪೊಲೀಸ್ ಸಮವಸ್ತ್ರದಲ್ಲಿಯೇ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಇದ್ದರೂ ಕೂಡ ಯಾಕೆ ಅವರ ಮೇಲೆ ಎಫ್ಐಆರ್ ದಾಖಲಿಸಿಲ್ಲ?’ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಸಂಬಂಧವಾಗಿ ಅಕ್ಕನ ಮಗನೇ ತಮಗಾದ ಅನ್ಯಾಯದ ವಿರುದ್ಧ ಕಾನೂನು ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯದ ನ್ಯಾಯಾಧೀಶರು ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸಿದ್ದಾರೆ. ಆದರೆ ಇನ್ಸ್ಪೆಕ್ಟರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. ಕೆಲ ದಿನಗಳ ಹಿಂದೆ ಪ್ರೆಸ್ ಮೀಟ್ ಕರೆದ ಪ್ರಫುಲ್ಲ ಅವರು ನನ್ನ ಬಗ್ಗೆ ಹೇಳಿದ ಎಲ್ಲಾ ಮಾತುಗಳು ಸುಳ್ಳುಗಳಾಗಿವೆ. ಇದರ ಬಗ್ಗೆ ದಾಖಲೆಗಳನ್ನು ನಾನು ಒದಗಿಸುವುದಾಗಿ ಹೇಳಿದರು. ಇನ್ಸ್ಪೆಕ್ಟರ್ ಸಂದೇಶ್ ಅವರ ಮೊಬೈಲ್ ಪರಿಶೀಲನೆ, ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಅವರ ಐಬಿ ಗುಂಪಿನಲ್ಲಿ ಇರುವ ಎಲ್ಲಾ ಸಂಪರ್ಕಗಳ ಮೇಲೂ ತನಿಖೆ ನಡೆಯಬೇಕು. ಹಾಗೆಯೇ ಪ್ರಫುಲ್ಲ ಅವರ ಮೊಬೈಲ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನೂ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.