ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ ಆತಂಕದಲ್ಲಿ ಜನ

ಉಡುಪಿ ಜನವರಿ 11: ಶಿವಮೊಗ್ಗ ಜಿಲ್ಲೆಯಲ್ಲಿ ಜನರ ಸಾವಿಗೆ ಕಾರಣವಾಗುತ್ತಿರುವ ಮಂಗನ ಕಾಯಿಲೆ ಈಗ ಕರಾವಳಿ ಭಾಗಕ್ಕೂ ಹಬ್ಬಿರುವ ಭೀತಿ ಹೆಚ್ಚಾಗಿದ್ದು, ಕಾರ್ಕಳ ತಾಲ್ಲೂಕಿನ ಹಿರ್ಗಾಣ ಗ್ರಾಮದಲ್ಲಿ ಮಂಗನ ಶವ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಮಂಗನಕಾಯಿಲೆ ಭೀತಿ ಹೆಚ್ಚಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕುಂದಾಪುರ ತಾಲ್ಲೂಕಿನ ಸಿದ್ದಾಪುರ, ಹೊಸಂಗಡಿ ಹಾಗೂ ಶೀರೂರಿನಲ್ಲಿ 4 ಮಂಗಗಳ ಶವ ಪತ್ತೆಯಾಗಿತ್ತು. ಜಿಲ್ಲೆಯ ಶಿರೂರು ಮೇಲ್ಪಂಕ್ತಿ ಎಂಬಲ್ಲಿ ಎರಡು ಮಂಗಗಳ ಶವ ದೊರೆತಿದೆ. ಸಿದ್ದಾಪುರ ಕಾಡಲ್ಲಿ ಈವರೆಗೆ 9 ಮತ್ತು ಹಳ್ಳಿಹೊಳೆಯಲ್ಲಿ 2 ಮಂಗನ ಕಳೇಬರ ಪತ್ತೆಯಾಗಿದೆ. ದಿನೇದಿನೇ ಮಂಗಗಳ ಸಾವು ಹೆಚ್ಚುತ್ತಿರುವುದು ಈಗ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.
ಮಂಗಗಳು ಸತ್ತ ಪ್ರದೇಶಕ್ಕೆ ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ‘ಸತ್ತ ಮಂಗಗಳ ಶವಪರೀಕ್ಷೆ ನಡೆಸಲಾಗಿದ್ದು, ದೇಹದ ಭಾಗಗಳನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಈ ನಡುವೆ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಮಂಗನಕಾಯಿಲೆ ಹರಡುವ ಉಣ್ಣೆಗಳ ನಿಯಂತ್ರಣಕ್ಕೆ ಪಶ್ಚಿಮಘಟ್ಟಗಳ ತಪ್ಪಲಿನ ಗ್ರಾಮಗಳಲ್ಲಿ ರಾಸಾಯನಿಕ ಸಿಂಪರಣೆ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾಡಳಿತ ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮಂಗನ ಕಾಯಿಲೆ ಸೊಂಕು ಇರುವ ಪ್ರಕರಣ ಪತ್ತೆಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ನಡವೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ 59 ರೋಗಿಗಳ ಪೈಕಿ 21 ಮಂದಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. 34 ರೋಗಿಗಳಲ್ಲಿ ಸೋಂಕು ಪತ್ತೆಯಾಗಿಲ್ಲ. 33 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ 26 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಎಂಸಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

Facebook Comments

comments