ರಾಮನಗರ, ಮಾರ್ಚ್ 31: ಮನುಷ್ಯ-ಪ್ರಾಣಿ ಸಂಬಂಧದ ಅಪರೂಪದ ಮಮತೆಯನ್ನು ಕಣ್ಣಿಗೆ ಕಟ್ಟುವಂತಹ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ವೃದ್ಧೆಯೊಬ್ಬರ ಸಾವಿಗೆ ಕೋತಿಯೊಂದು ಮೌನವಾಗಿ ಮರುಗಿ, ಮೃತದೇಹದ ಪಕ್ಕದಲ್ಲೇ ಮಲಗಿ ಕಣ್ಣೀರು ಹಾಕಿದ ದೃಶ್ಯ ಎಲ್ಲರ ಮನಸ್ಸನ್ನು ಕದಡಿತು.

ಗ್ರಾಮದ ನಿವಾಸಿ 80 ವರ್ಷದ ಪಾರ್ವತಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು, ಅವರ ಮೃತದೇಹದ ಬಳಿ ಕಪಿರಾಯ ಕುಳಿತುಕೊಂಡು ಮನುಷ್ಯರಂತೆ ಮುಖಕ್ಕೆ ಮುಖ ನೀಡಿ, ಅಳುತ್ತಿರುವಂತೆಯೇ ಕಣ್ಣೀರು ಸುರಿಸುತ್ತಿದ್ದ ದೃಶ್ಯ ನೋಡುಗರ ಕಣ್ಣಲ್ಲೂ ನೀರು ತರಿಸಿತು. ಕೆಲ ಹೊತ್ತು ಮೃತದೇಹದ ಮೇಲೆಯೇ ಮಲಗಿ ಅಚಲವಾಗಿ ಕುಳಿತಿದ್ದ ಕೋತಿಯ ವರ್ತನೆ ಅಲ್ಲಿ ನೆರೆದಿದ್ದವರನ್ನು ನಿಬ್ಬೆರಗಾಗುವಂತೆ ಮಾಡಿತು.
ಸ್ಥಳೀಯರ ಪ್ರಕಾರ, ಪಾರ್ವತಮ್ಮ ಅವರು ಪ್ರತಿದಿನ ಮನೆ ಬಳಿಗೆ ಬರುತ್ತಿದ್ದ ಕೋತಿಗೆ ಆಹಾರ ನೀಡಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ದಿನನಿತ್ಯದ ಈ ಒಡನಾಟದಿಂದ ಕೋತಿ ಮತ್ತು ವೃದ್ಧೆಯ ನಡುವೆ ವಿಶೇಷ ಬಾಂಧವ್ಯ ಬೆಳೆದಿತ್ತು. ಅವರ ಅಕಾಲಿಕ ಅಗಲಿಕೆಯ ಸುದ್ದಿ ಅರಿತಂತೆಯೇ ಕೋತಿಯು ವ್ಯಕ್ತಪಡಿಸಿದ ದುಃಖ ಎಲ್ಲರನ್ನೂ ಭಾವುಕರನ್ನಾಗಿಸಿತು. ಈ ಘಟನೆ, ಪ್ರಾಣಿಗಳಿಗೂ ಪ್ರೀತಿ, ಬಂಧ ಹಾಗೂ ನಷ್ಟದ ನೋವು ಅರ್ಥವಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿ ಪರಿಣಮಿಸಿದ್ದು, ಗ್ರಾಮಸ್ಥರ ಹೃದಯದಲ್ಲಿ ದೀರ್ಘಕಾಲ ಉಳಿಯುವ ದೃಶ್ಯವಾಯಿತು.