ಪಶ್ಚಿಮಘಟ್ಟದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಂಗಗಳ ಸಾವು- ಆತಂಕದಲ್ಲಿ ಕರಾವಳಿ ಜನತೆ

ಮಂಗಳೂರು ಜನವರಿ 15: ಮಲೆನಾಡಿನ ಜನರ ನಿದ್ದೆಗೆಡಿಸಿದ ಮಂಗನಕಾಯಿಲೆ ಈಗ ಕರಾವಳಿಯ ಜನ ನಿದ್ದೆಗೆಡಿಸಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ನಿತ್ಯ ಮಂಗಗಳು ಸಾವನಪ್ಪತ್ತಾ ಇರುವುದು ಕಾಯಿಲೆಯ ತೀವ್ರತೆಯನ್ನು ತೋರಿಸುತ್ತಿದ್ದು, ಸ್ಥಳೀಯ ಜನರ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಈ ಕಾಯಿಲೆ ನೆರೆಯ ಕರಾವಳಿಯಲ್ಲೂ ಭೀತಿ ಹುಟ್ಟಿಸಿದೆ. ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಂಗಗಳ ಸಾವು ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇದ್ದು ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತು ಕೋತಿಗಳು ಸಾವನ್ನಪ್ಪಿದೆ.

ಈ ಪೈಕಿ ಹನ್ನೆರಡು ಮಂಗಗಳ ಮರಣೋತ್ತರ ಪರೀಕ್ಷೆಯನ್ನು ಹೆಚ್ಚಿನ ತಪಾಸಣೆಗೆ ಕಳಿಸಲಾಗಿದೆ. ಜೊತೆಗೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಔಷಧಿಯನ್ನು ಸಿದ್ಧಮಾಡಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. 1080 ಬಾಟಲಿ ಡಿಎಂಪಿ ತೈಲ ವನ್ನು ಶಿವಮೊಗ್ಗ ದಿಂದ ತರಿಸಿಕೊಳ್ಳಲಾಗಿದೆ.

ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಮಂಗಗಳ ಸಾವು ಸಂಭವಿಸುತ್ತಿರುವುದರಿಂದ ಈ ತಾಲೂಕುಗಳಲ್ಲಿ ಕರಪತ್ರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಮಂಗಗಳ ಸಾವು ಸಂಭವಿಸಿದ್ರೆ ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ. ಕಾಯಿಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಕೇರಳದ ತಜ್ಞ ವೈದ್ಯರನ್ನೂ ಈ ಸಭೆಗೆ ಕರೆಸಲಾಗಿತ್ತು.

ಮಣಿಪಾಲದ ಕೆಎಂಸಿ ಆಸ್ಪತ್ರೆಯೊಂದರಲ್ಲೇ 73 ರೋಗಿಗಳಿಗೆ ಚಿಕಿತ್ಸೆ ನೀಡಲಾಗ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಪೈಕಿ 50 ಮಂದಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಈಗ ಹನ್ನೇರಡು ರೋಗಿಗಳಿಗೆ ಮಣಿಪಾಲದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ವಿಶೇಷ ವಾರ್ಡ್ ವ್ಯವಸ್ಥೆ, ತಜ್ಞ ವೈದ್ಯರನ್ನು ನೇಮಿಸಲಾಗಿದೆ. ಉಚಿತವಾಗಿ ಚಿಕಿತ್ಸೆ ನೀಡಲಿ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳು ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದು ದಟ್ಟ ಕಡಿನಿಂದ ಆವೃತವಾಗಿದೆ. ಹೀಗಾಗಿ ಈ ಭಾಗದ ಜನರು ಮಂಗನ ಕಾಯಿಲೆಯ ಭೀತಿಯಲ್ಲೇ ದಿನ ಕಳೆಯುವಂತಾಗಿದೆ. 30 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಇದೀಗ ಶಿವಮೊಗ್ಗ, ಸಾಗರದಿಂದ ಜಿಲ್ಲೆಗೆ ಪಸರಿಸಿದ್ದು ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆಗೆ ಮುಂದಾಗಿದ್ದಾರೆ.

Facebook Comments

comments