ಪ್ರಧಾನಿ ಮೋದಿ ನೋಡಲು ಮರವೇರಿ ಕುಳಿತ ಜನರು ,ಕೆಳಗೆ ಇಳಿಯುವಂತೆ ಮನವಿ ಮಾಡಿದ ಪ್ರಧಾನಿ

ಮಂಗಳೂರು ಎಪ್ರಿಲ್ 13: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಣಲು, ಅವರ ಭಾಷಣ ಕೇಳಲು ಮರವೇರಿ ಕುಳಿತಿದ್ದ ಜನರನ್ನು ಮರದಿಂದ ಕೆಳಗೆ ಇಳಿಯವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ ಘಟನೆ ನಡೆದಿದೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಗೆ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು. ಇಡೀ ಮೈದಾನ ತುಂಬಿದ್ದು, ಕುಳಿತು ಕೊಳ್ಳಲು ಸ್ಥಳ ಸಿಗದೇ ಕೆಲವರು ಮೈದಾನದ ಬದಿಯಲ್ಲಿದ್ದ ಮರವೇರಿ ಕುಳಿತಿದ್ದರು.

ಭಾಷಣ ಮಾಡಲು ಪ್ರಾರಂಭಿಸಿದ ಪ್ರಧಾನಿ ಮೋದಿ ಅವರು ಮರದ ಮೇಲಿಂದಲೇ ಕೈಬೀಸುತ್ತಿದ್ದ ಕಾರ್ಯಕರ್ತರನ್ನು ಗಮನಿಸಿದ್ದಾರೆ. ವೇದಿಕೆಯಿಂದ ಪ್ರಧಾನಿ ಮೋದಿ, ’ಅಪಾಯವನ್ನು ತಂದುಕೊಳ್ಳುವಂತಹ ಈ ರೀತಿಯ ಪ್ರಯತ್ನ ಬೇಡ. ಕೂಡಲೇ ಮರದಿಂದ ಕೆಳಗೆ ಇಳಿಯಿರಿ’ ಎಂದು ವಿನಂತಿಸಿದರು.

‘ಈ ರೀತಿ ತೊಂದರೆ ತೆಗೆದುಕೊಳ್ಳಬೇಡಿ. ನಾನು ನಿಮ್ಮವ, ಮತ್ತೆ ಇಲ್ಲಿಗೆ ಬರುವೆ, ಮತ್ತೆ ಭೇಟಿ ಮಾಡೋಣ…ಕೆಳಗೆ ಇಳಿಯಿರಿ…’ ಎನ್ನುತ್ತಿದ್ದಂತೆ ಜನರ ಉದ್ಗಾರ ಜೋರಾಯಿತು.

ಪ್ರಧಾನಿ ನರೆಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದು, ನೆಹರೂ ಮೈದಾನ ಸೇರಿದಂತೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ಎಲ್ಲೆಲ್ಲಿಯೂ ಜನಜಾತ್ರೆ ಕಾಣಿಸುತ್ತಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು.