ಧಾರವಾಡ, ಮಾರ್ಚ್ 30: ಇಲ್ಲಿನ ಕೇಂದ್ರ ಕಾರಾಗೃಹದ ಭದ್ರತಾ ವ್ಯವಸ್ಥೆಯು ಮತ್ತೊಮ್ಮೆ ತೀವ್ರ ವಿವಾದಕ್ಕೆ ಗುರಿಯಾಗಿದೆ. ಪೋಕ್ಸೋ ಕಾಯಿದೆಯಡಿ ಜೈಲು ಸೇರಿರುವ ಆರೋಪಿಯೊಬ್ಬ, ಜೈಲಿನ ಕಂಬಿಗಳ ಹಿಂದೆಯೇ ಕುಳಿತು ಅಪ್ರಾಪ್ತ ಸಂತ್ರಸ್ತೆಗೆ ವಿಡಿಯೋ ಕರೆ ಮಾಡುವ ಮೂಲಕ ಮಾನಸಿಕ ಕಿರುಕುಳ ಹಾಗೂ ಪ್ರಾಣ ಬೆದರಿಕೆ ಹಾಕುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಹುಡುಗಿ ವಿಚಾರವಾಗಿ ಜೈಲು ಪಾಲಾಗಿದ್ದರೂ ಬುದ್ಧಿ ಕಲಿಯದ ಈ ಪಾಗಲ್ ಪ್ರೇಮಿ, ಮಾರ್ಚ್ 13ರಂದು ಜೈಲಿನ ಒಳಗಿನಿಂದಲೇ ಸಂತ್ರಸ್ತೆಗೆ ವಿಡಿಯೋ ಕರೆ ಮಾಡಿದ್ದಾನೆ. ತನ್ನ ಕೈ ಮೇಲೆ ಸಂತ್ರಸ್ತೆಯ ಹೆಸರನ್ನು ಬರೆದುಕೊಂಡು ಅದನ್ನು ತೋರಿಸುತ್ತಾ ವಿಕೃತಿ ಮೆರೆದಿದ್ದಾನೆ. ಅಷ್ಟೇ ಅಲ್ಲದೆ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಸಾಕ್ಷಿ ನುಡಿಯುವಂತೆ ಒತ್ತಾಯಿಸಿರುವ ಆರೋಪಿ, ಒಂದು ವೇಳೆ ಕರೆ ಸ್ವೀಕರಿಸದಿದ್ದರೆ ಅಥವಾ ತನ್ನ ವಿರುದ್ಧ ಮಾತನಾಡಿದರೆ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಮತ್ತು ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.
ಅತಿ ಹೆಚ್ಚು ಭದ್ರತೆ ಇರುವ ಕೇಂದ್ರ ಕಾರಾಗೃಹದೊಳಗೆ ಸ್ಮಾರ್ಟ್ ಫೋನ್ ಲಭ್ಯವಾಗಿದ್ದು ಹೇಗೆ? ಎಂಬುದು ಈಗ ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ. ಈ ಗಂಭೀರ ಲೋಪದ ಬಗ್ಗೆ ಸಂತ್ರಸ್ತೆಯ ಕುಟುಂಬದವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜೈಲು ಸಿಬ್ಬಂದಿಯ ಪರೋಕ್ಷ ಸಹಕಾರವಿಲ್ಲದೆ ಇಂತಹ ಕೃತ್ಯ ಅಸಾಧ್ಯ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯಿಂದ ಆತಂಕಗೊಂಡಿರುವ ಸಂತ್ರಸ್ತೆಯ ಕುಟುಂಬವು ಇದೀಗ ಶ್ರೀರಾಮಸೇನೆ ಮುಖಂಡರ ಮೊರೆ ಹೋಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಂಘಟನೆಯು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯ ವಿರುದ್ಧ ಕಿಡಿಕಾರಿದೆ.”ಮಾನ್ಯ ಗೃಹ ಸಚಿವರೇ, ಜೈಲಿನೊಳಗೆ ಸ್ಮಾರ್ಟ್ ಫೋನ್ ಹೋಗಲು ಹೇಗೆ ಸಾಧ್ಯ? ಇದು ಸುಧಾರಣಾ ಕೇಂದ್ರವೋ ಅಥವಾ ಅಪರಾಧ ಎಸಗಲು ಇರುವ ಸುರಕ್ಷಿತ ತಾಣವೋ?” ಎಂದು ಮುಖಂಡರು ಪ್ರಶ್ನಿಸಿದ್ದು, ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.