ಉಡುಪಿ ಬಜೆ ಡ್ಯಾಂ ಸುತ್ತಮುತ್ತ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಶ್ರಮದಾನ

ಉಡುಪಿ ಮೇ 9 : ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಬಜೆ ಡ್ಯಾಂ ನಲ್ಲಿ ನೀರಿನ ಹರಿವು ಹೆಚ್ಚಿಸುವ ಸಲುವಾಗಿ ಸ್ಥಳೀಯ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ನಾಗರಿಕರಿಂದ ಬಜೆ ಡ್ಯಾಂ ಸುತ್ತಮುತ್ತ ಶ್ರಮದಾನ ನಡೆಸಲಾಗಿದೆ.

ಬಜೆ ಡ್ಯಾಂ ನಲ್ಲಿ ನೀರಿನ ಮಟ್ಟ ಇದ್ದರೂ ಕೂಡ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇರುವ ನೀರನ್ನು ಕೂಡ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಶಾಸಕರ ಸೂಚನೆಯಂತೆ ಶಾಸಕರ ಜೊತೆಗೆ ನಾಗರಿಕರು ಕೂಡ ಶ್ರಮದಾನದಲ್ಲಿ ಭಾಗವಹಿಸಿದ್ದರು.

ಈ‌ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಬಜೆ ಡ್ಯಾಂ’ನಲ್ಲಿ ನೀರಿ‌ನ ಸಮಸ್ಯೆ ಉಂಟಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅನೇಕ ಬಾರಿ ಈ ಬಗ್ಗೆ ಗಮನಕ್ಕೆ ತಂದರು ಕೂಡ ಇತ್ತ ಕಡೆ ಗಮನ ಹರಿಸಲಿಲ್ಲ. ಅದರ ಪರಿಣಾಮವಾಗಿ ಇಂದು ನಾವು ನೀರಿನ‌ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದರು.

ಅದೇ ರೀತಿ ಈಗಾಗಲೇ ನಗರಸಭಾ ಸದಸ್ಯರು ಮತ್ತು ನಾವುಗಳು ಸೇರಿ‌ ಎಲ್ಲಾ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.‌ ಬಜೆ ಡ್ಯಾಂ’ಗೆ ನೀರು ಹರಿದು ಬರುವ ಪ್ರದೇಶಗಳಲ್ಲಿ ಅಡೆತಡೆ ಇದ್ದು ನೀರು ಸರಿಯಾಗಿ ಹರಿಯುತ್ತಿಲ್ಲ, ಅದಕ್ಕಾಗಿ ಇಂದು ನಾವು ಈ ಶ್ರಮದಾನದ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತಿದ್ದೇವೆ ಎಂದರು.