ಅಯೋಧ್ಯೆ ತೀರ್ಪಿನ ಸಂದರ್ಭ ಸಮಾಜದ ಸ್ವಾಸ್ಥ್ಯ ಕಾಪಾಡಿದ ಎಸ್‍ಐಗೆ ಸಸ್ಪೆಂಡ್ ಶಿಕ್ಷೆ – ಎಸ್ಪಿ ವಿರುದ್ದ ರಘುಪತಿ ಭಟ್ ಆಕ್ರೋಶ

ಉಡುಪಿ ನವೆಂಬರ್ 12: ಸುಪ್ರೀಂಕೋರ್ಟ್ ಅಯೋಧ್ಯೆ ರಾಮಮಂದಿರದ ತೀರ್ಪಿನ ಸಂದರ್ಭ ನಡೆದ ಹಿಂದೂ ಮುಸ್ಲಿಂ ಪ್ರೇಮ ಪ್ರಕರಣವೊಂದನ್ನು ರಾಜಿ ಪಂಚಾಯ್ತಿಯಲ್ಲಿ ಇತ್ಯರ್ಥ ಮಾಡಿದ್ದ ಉಡುಪಿ ಎಸ್ ಐಯನ್ನು ಉಡುಪಿ ಎಸ್ಪಿ ನಿಶಾ ಜೇಮ್ಸ್ ಸಸ್ಪೆಂಡ್ ಮಾಡಿದ್ದಾರೆ.

ಹಿಂದೂ ಯುವತಿ ಮತ್ತು ಮುಸಲ್ಮಾನ ಯುವಕ ಉಡುಪಿಯ ಭುಜಂಗ ಪಾರ್ಕ್ ನಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗಿದ್ದರು.ಯುವಕ, ಯುವತಿಗೆ ಸ್ಥಳೀಯರು ಧರ್ಮದೇಟು ಕೊಟ್ಟಿದ್ದರು. ಸ್ಥಳಕ್ಕೆ ಆಗಮಿಸಿದ್ದ ಉಡುಪಿ ನಗರಠಾಣಾ ಎಸ್‍ಐ ಅನಂತಪದ್ಮನಾಭ ಎರಡೂ ಕಡೆಯವರನ್ನು ಠಾಣೆಗೆ ಕರೆಸಿದ್ದರು. ಎರಡೂ ಕಡೆಯವರು ದೂರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜಿಯಲ್ಲಿ ಪ್ರಕರಣ ಇತ್ಯರ್ಥ ಮಾಡಿದ್ದರು. ಅಲ್ಲದೆ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪ್ರೇಮ ಪ್ರಕರಣದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ವಹಿಸಿದ್ದರು.

ಬಳಿಕ ಯುವಕನ ಕಡೆಯವರು ಹಲ್ಲೆ ಮಾಡಿದ ಬಗ್ಗೆ ಎಸ್‍ಪಿಗೆ ದೂರು ನೀಡಿದ್ದರು. ಎಸ್‍ಪಿ ನಿಶಾ ಜೇಮ್ಸ್ ದೂರನ್ನು ದಾಖಲಿಸಿಕೊಳ್ಳದೆ ಕರ್ತವ್ಯಲೋಪ ಮಾಡಿದ ಆರೋಪದಲ್ಲಿ ನಗರ ಠಾಣಾ ಎಸ್‍ಐ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿದ್ದಾರೆ.

ಸೌಹಾರ್ದಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ಅನಂತ ಪದ್ಮನಾಭ ತೆಗೆದುಕೊಂಡ ಕ್ರಮ ಸರಿಯಾಗಿದೆ. ಅಯೋಧ್ಯೆ ತೀರ್ಪು ಬರಬೇಕಾಗಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಎಸ್‍ಐ ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ಎಸ್‍ಪಿ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ಉಡುಪಿ ಜಿಲ್ಲೆಯ ವ್ಯಾಪ್ತಿಯ ಮಟ್ಕಾ, ಗಾಂಜಾ ಮತ್ತಿತರ ದಂಧೆ ವಿರುದ್ಧ ಕ್ರಮ ಕೈಗೊಳ್ಳದವರನ್ನು ಸಸ್ಪೆಂಡ್ ಮಾಡಿ, ಈ ಬಗ್ಗೆ ಗೃಹ ಸಚಿವರು, ಐಜಿಪಿಗೆ ದೂರು ನೀಡಿರುವುದಾಗಿ ಶಾಸಕರು ಹೇಳಿದ್ದಾರೆ.

Facebook Comments

comments