Connect with us

    LATEST NEWS

    ಸೋಲಿನ ಹತಾಶೆಯಿಂದ ಕಾಂಗ್ರೇಸ್ ಮುಖಂಡರ ಆರೋಪ – ಶಾಸಕ ಕಾಮತ್

    ಮಂಗಳೂರು ನವೆಂಬರ್ 11: ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡದೆ ರಸ್ತೆ ಸಂಚಾರ ಬದಲಿಸಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

    ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆ ಬದಲಿಸಿದ ಕಾರಣ ಉಂಟಾದ ಟ್ರಾಫಿಕ್ ಸಮಸ್ಯೆಯ ಕುರಿತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಒಂದು ದಿನದಲ್ಲಿ ಸಮಸ್ಯೆ ಪರಿಹರಿಸುವ ಕಾರ್ಯದಲ್ಲಿ ಅಲ್ಪ ಮಟ್ಟಿಗೆ ಯಶಸ್ಸು ದೊರೆತಿದೆ. ಅಧಿಕಾರಿಗಳು ಪ್ರಮುಖ ರಸ್ತೆಯಲ್ಲಿ ಕಾಮಗಾರಿ ಪ್ರಾರಂಭಿಸುವ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡದಿರುವ‌ ಕಾರಣ ಸಹಜವಾಗಿ ಗೊಂದಲ ಉಂಟಾಗಿತ್ತು. ಹಾಗಾಗಿ ಸೋಮವಾರವೇ ತುರ್ತು ಸಭೆ ನಡೆಸಿ ಸಾರ್ವಜನಿಕರು ಹಾಗೂ ಅಧಿಕಾರಿಗಳ ಅಭಿಪ್ರಾಯ ಪಡೆದುಕೊಂಡು ಬದಲಿಯ ವ್ಯವಸ್ಥೆಯ ಆದೇಶ ನೀಡಿದ್ದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

    ಸೋಮವಾರ ರಾತ್ರಿಯ ವೇಳೆಗೆ ಬದಲಿ ವ್ಯವಸ್ಥೆಯನ್ನು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿ, ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದ್ದೇನೆ. ಹಾಗೂ ತ್ವರಿತವಾಗಿ ಬಿಟ್ಟುಕೊಡಬಹುದಾದ ಕಡೆಗಳಲ್ಲಿ ರಾತ್ರಿಯ ವೇಳೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆ ಕಾರಣಗಳಿಂದ ಒಂದೇ ದಿನದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಸಹಾಯಕವಾಗಿದೆ ಎಂದರು.

    ಜೆ.ಆರ್ ಲೋಬೋ- ಮಿಥುನ್ ರೈಗೆ ಶಾಸಕ ಕಾಮತ್ ತಿರುಗೇಟು

    ವೇದವ್ಯಾಸ್ ಕಾಮತ್ ಅವರಿಗೆ ಅನುಭವದ ಕೊರತೆಯಿದೆ ಎಂದಿದ್ದ ಮಾಜಿ ಶಾಸಕ ಜೆ.ಆರ್ ಲೋಬೋ ಹಾಗೂ ಮಿಥುನ್ ರೈ ಅವರ ಹೇಳಿಕೆಗೆ ಪ್ರತಿಕ್ರಯಿಸಿರುವ ಶಾಸಕ ಕಾಮತ್,ಸರಕಾರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅನುಭವವಿದ್ದ ಜೆ.ಆರ್ ಲೋಬೋ ಅವರು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಎಡಿಬಿ – 1 ಮುಖ್ಯಸ್ಥರಾಗಿದ್ದ ಯೋಜನೆ ಯಾಕೆ ವಿಫಲವಾಗಿತ್ತು ?
    ಮಂಗಳೂರಿನ ಶಕ್ತಿನಗರದಲ್ಲಿ ವಸತಿ ಯೋಜನೆಯ 930ವಸತಿ ನಿರ್ಮಾಣಕ್ಕೆ ಆಯ್ಕೆ ಮಾಡಿದ ಜಮೀನು ಅರಣ್ಯ ಪ್ರದೇಶವಾಗಿದ್ದರೂ ಕೂಡ ಅವೆಲ್ಲವನ್ನೂ ಗಣನೆಗೆ ತೆದುಕೊಳ್ಳದೆ ತುರ್ತಾಗಿ ಹಕ್ಕುಪತ್ರ ವಿತರಿಸಿ, ಗುದ್ದಲಿಪೂಜೆ ನೆರವೇರಿಸಿದಾಗ ಜೆ.ಆರ್ ಲೋಬೊ ಅವರಿಗೆ ಅನುಭವದ ಕೊರತೆಯಿತ್ತೆ. ಕಂಕನಾಡಿ ಹಾಗೂ ಕದ್ರಿ ಮಾರುಕಟ್ಟೆ ನಿರ್ಮಾಣ ಯೋಜನೆಗೆ ಬ್ಯಾಂಕ್ ಸಾಲದ ಕುರಿತು ಯಾವುದೇ ರೀತಿಯ ಪ್ರಕ್ರಿಯೆ ಪೂರ್ಣಗೊಳಿಸದೆ ಗುದ್ದಲಿಪೂಜೆ ನೆರವೇರಿಸಿದಾಗ ಅವರಿಗೆ ಅನುಭವದ ಕೊರತೆ ಇತ್ತೇ ಎಂದು ಪ್ರಶ್ನಿಸಿದ್ದಾರೆ.

    ದೇಶದೆಲ್ಲೆಡೆ ಕಾಂಗ್ರೇಸ್ ಹೀನಾಯವಾಗಿ ಸೋಲುತ್ತಿದೆ. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಭಾರತೀಯ ಜನತಾ ಪಾರ್ಟಿ ಜಯ ಗಳಿಸಿದೆ. ಇದು ಜನರಿಗೆ ನಮ್ಮ ಪಕ್ಷದ ಮೇಲಿನ ನಂಬಿಕೆಯಾಗಿದೆ. ಇವೆಲ್ಲಾ ಕಾರಣಗಳಿಂದ ಹತಾಶರಾಗಿರುವ ಕಾಂಗ್ರೇಸ್ ಮುಖಂಡರು ಮಿಥ್ಯಾರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply