ಬೆಳ್ತಂಗಡಿ, ಮಾರ್ಚ್ 15: ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆ ಹಾಗೂ ಸೇತುವೆ ಕಾಮಗಾರಿಯ ಪ್ರಗತಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸುಮಾರು ₹240 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆ ಜಿಲ್ಲೆಯಲ್ಲಿ ಅತಿ ದೊಡ್ಡ ಹಾಗೂ ಪ್ರಥಮ ಏತ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪರಿಶೀಲನೆಯ ವೇಳೆ ಕಾಮಗಾರಿಯ ಗುಣಮಟ್ಟ ಕಾಪಾಡುವಂತೆ ಸಂಬಂಧಿತ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಅವರು ಸೂಚನೆ ನೀಡಿದರು. ಯೋಜನೆ ಪೂರ್ಣಗೊಂಡ ಬಳಿಕ ಕೃಷಿ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಯೋಜನೆಯಿಂದ ಸುಮಾರು 16 ಗ್ರಾಮಗಳ 1,100 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಜೊತೆಗೆ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಮೂಲಕ ಮುಗೇರಡ್ಕದಿಂದ ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿಗೆ ನೇರ ಸಂಪರ್ಕ ಸಿಗಲಿದೆ. ಇದರಿಂದ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ ಎರಡೂ ದಂಡೆಗಳ ಜನರಿಗೆ ಸಂಚಾರ ಸುಗಮವಾಗಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಮುಗೇರಡ್ಕ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳ ರೈತರಿಗೆ ವರ್ಷಪೂರ್ತಿ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗುವ ಜೊತೆಗೆ ಉತ್ಪಾದಕತೆ ಹೆಚ್ಚುವ ನಿರೀಕ್ಷೆಯಿದೆ.
ಹೊಸ ಸೇತುವೆ ನಿರ್ಮಾಣದಿಂದ ನೇತ್ರಾವತಿ ನದಿಯ ಎರಡೂ ದಂಡೆಗಳ ಜನರಿಗೆ ಪ್ರಯಾಣದ ದೂರ ಮತ್ತು ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಜೊತೆಗೆ ಕಿಂಡಿ ಅಣೆಕಟ್ಟು ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವೂ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.