LATEST NEWS
ಐವನ್ ಡಿಸೋಜ ನಾಯಕತ್ವದಲ್ಲಿ ಗಲಾಟೆ ಆಯ್ತು ಎಂದು ಪೊಲೀಸರು ಸುಮ್ಮನಾದ್ರಾ? -ಡಾ.ವೈ.ಭರತ್ ಶೆಟ್ಟಿ
ಮಂಗಳೂರು ಅಗಸ್ಟ್ 20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೂಂಡಾ ಸಂಸ್ಕೃತಿ ರಾಜಕಾರಣ ಹೊಸದೇನೂ ಅಲ್ಲ. ಅದರ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಬಸ್ಸಿಗೆ ಕಲ್ಲು ತೂರಾಟ ಮಾಡುವುದು, ಟೈರ್ ಗೆ ಬೆಂಕಿ ಹಚ್ಚುವುದು ಮಾಡಿದ್ದಾರೆ. ಇದು ರಾಜ್ಯದಲ್ಲಿ ಪಶ್ಚಿಮ ಬಂಗಾಲ ಮಾದರಿಯಲ್ಲಿ ಹಿಂಸಾಕೃತ್ಯ ನಡೆಸುವುದರ ಪೂರ್ವಸೂಚನೆಯಾಗಿದೆ“ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ಸಾರ್ವಜನಿಕರು ಸಂಚರಿಸುವ ಬಸ್ಸಿಗೆ ಕಲ್ಲು ತೂರಾಟ ನಡೆಸಿ ಪ್ರಯಾಣಿಕರಿಗೆ ಗಾಯವಾಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಘಟನೆಯಲ್ಲಿ ಒಬ್ಬ ನಾಮ ನಿರ್ದೇಶಿತ ಮನಪಾ ಕಾರ್ಪೋರೇಟರ್ ಮತ್ತೊಬ್ಬ ಗ್ರಾಮ ಪಂಚಾಯತ್ ಸದಸ್ಯ ಸೇರಿದ್ದಾರೆ. ಅವರು ಪೊಲೀಸ್ ಠಾಣೆಯಲ್ಲಿ ತಾವೇ ಕಲ್ಲು ಎಸೆದಿದ್ದೇವೆ ನೀವೇನು ಮಾಡುತ್ತೀರಿ ಎಂದು ಬೆದರಿಕೆ ಹಾಕಿದ್ದರೂ ಪೊಲೀಸರು ಸುಮ್ಮನಿರುವುದೇಕೆ” ಎಂದು ಭರತ್ ಶೆಟ್ಟಿ ಕಿಡಿಕಾರಿದ್ದಾರೆ.
“ಇಲ್ಲಿ ಕಲ್ಲು ತೂರಾಟ ಮಾಡಲು ಕಲ್ಲು ಎಲ್ಲಿಂದ ಬಂತು? ನಾಲ್ಕೈದು ಟೈರ್ ಎಲ್ಲಿಂದ ತಂದರು? ಐವನ್ ಡಿಸೋಜ ನಾಯಕತ್ವದಲ್ಲಿ ಗಲಾಟೆ ಆಯ್ತು ಎಂದು ಪೊಲೀಸರು ಸುಮ್ಮನಾದ್ರಾ? ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಇಂತಹ ಕೃತ್ಯಗಳಿಗೆ ಪೊಲೀಸರು ಕಡಿವಾಣ ಹಾಕದೇ ಇದ್ದರೆ ಮುಂದೆ ಬೇರೆ ಪಕ್ಷ, ಸಾಮಾಜಿಕ ಸಂಘಟನೆಗಳು ಕೂಡ ಇದೇ ತರಾ ಕಲ್ಲು ತೂರಾಟ, ಟೈರ್ ಬೆಂಕಿ ಹಚ್ಚಬಹುದು. ಇದು ಗಲಭೆ ಸೃಷ್ಟಿಗೆ ಪೂರ್ವಯೋಜಿತ ಕೃತ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಐವನ್ ಡಿಸೋಜ ಮತ್ತು ಇತರರ ಮೇಲೆ ಕ್ರಮ ಯಾಕೆ ಕೈಗೊಂಡಿಲ್ಲ? ಬಾಂಗ್ಲಾ ದೇಶದಲ್ಲಿ ಆದಂತೆ ಇಲ್ಲೂ ಆಗುತ್ತದೆ ಎಂದಿರುವ ಐವನ್ ರಾಷ್ಟ್ರ ದ್ರೋಹದ ಮಾತಾಡಿದ್ದಾರೆ. ಅವರ ವಿರುದ್ಧ ನಾಳೆ ಪ್ರತಿಭಟನೆ ನಡೆಸಲಿದ್ದೇವೆ“ ಎಂದು ಭರತ್ ಶೆಟ್ಟಿ ಆರೋಪಿಸಿದ್ದಾರೆ.
You must be logged in to post a comment Login