ಮಂಡ್ಯ , ಏಪ್ರಿಲ್ 07: ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವ ಕಂಟ್ರಾಕ್ಟರ್ ಪವನ್ (27) ಅವರ ಮೃತದೇಹವು ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ನಿವಾಸಿಯಾದ ಪವನ್, ಪ್ರಥಮ ದರ್ಜೆ ಕಂಟ್ರಾಕ್ಟರ್ ಆಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಹಾಗೂ ಖಾಸಗಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. ಏಪ್ರಿಲ್ 2 ರಂದು “ಕೆಲಸದ ನಿಮಿತ್ತ ಹೊರಹೋಗುತ್ತಿದ್ದೇನೆ, ಮನೆಗೆ ಬರುವುದು ತಡವಾಗಬಹುದು” ಎಂದು ಪೋಷಕರಿಗೆ ತಿಳಿಸಿ ತೆರಳಿದ್ದ ಪವನ್, ಅಂದಿನಿಂದ ನಾಪತ್ತೆಯಾಗಿದ್ದರು. ಮಗನ ಮೊಬೈಲ್ ಸ್ವಿಚ್ ಆಫ್ ಆದ ಕಾರಣ ಆತಂಕಗೊಂಡ ಪೋಷಕರು ಅರಕೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಏಪ್ರಿಲ್ 6 ರಂದು ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಸಮೀಪವಿರುವ ನದಿ ತೀರದಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.
ಮೃತ ಪವನ್ ಅವರ ಮೈಮೇಲೆ ಗಾಯದ ಗುರುತುಗಳಿರುವುದನ್ನು ಗಮನಿಸಿರುವ ಕುಟುಂಬಸ್ಥರು ಮತ್ತು ಆಪ್ತರು, ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎಂದು ಆರೋಪಿಸಿದ್ದಾರೆ. “ವ್ಯವಹಾರಿಕ ದ್ವೇಷ ಅಥವಾ ಹಣಕಾಸಿನ ವಿಚಾರವಾಗಿ ಪವನ್ನನ್ನು ಕೊಲೆ ಮಾಡಿ ನದಿಗೆ ಎಸೆಯಲಾಗಿದೆ” ಎಂದು ಮೃತರ ಸಂಬಂಧಿಕರು ದೂರಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಶ್ರೀರಂಗಪಟ್ಟಣ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. “ಸದ್ಯಕ್ಕೆ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪವನ್ ಅವರ ಕಾಲ್ ಡಿಟೇಲ್ಸ್ (CDR) ಪರಿಶೀಲಿಸಲಾಗುತ್ತಿದ್ದು, ಅವರ ಕೊನೆಯ ಲೊಕೇಶನ್ ಮತ್ತು ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.