ಪೌರತ್ವಕಾಯ್ದೆ ಪ್ರತಿಭಟನೆಗೆ ಬಳಸಿದ್ದ ಕುರ್ಚಿ ಸೇರಿದಂತೆ ಮಿನಿ ಲಾರಿಗೆ ಬೆಂಕಿ

ಮಂಗಳೂರು ಜನವರಿ 13: ಪೌರತ್ವ ಕಾಯ್ದೆ ವಿರುದ್ದದ ಪ್ರತಿಭಟನೆ ವೇಳೆ, ಪ್ರತಿಭಟನೆಗೆ ಬಳಸಿದ್ದ 2,500 ಕುರ್ಚಿಗಳು ಸೇರಿದಂತೆ ಮಿನಿ ಲಾರಿಗೆ ಬೆಂಕಿ ಬಿದ್ದಿರುವ ಘಟನೆ ಮಂಗಳೂರು ಹೊರ ವಲಯದ ದೇರಳಕಟ್ಟೆ ಸಮೀಪ ನಡೆದಿದೆ.

ದೇರಳಕಟ್ಟೆ ಪೌರತ್ವ ಸಂರಕ್ಷಣಾ ಸಮಿತಿಯಿಂದ ನಿನ್ನೆ ಪೌರತ್ವ ಖಾಯ್ದೆ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಲಾಗಿತ್ತು. ರ‍್ಯಾಲಿ ಮುಗಿದ ಬಳಿಕ ಕುರ್ಚಿಗಳನ್ನು ಮಿನಿ ಲಾರಿಗೆ ತುಂಬಿಸಲಾಗಿತ್ತು.

ಆದರೆ ಲಾರಿ ಸಮೇತ 2,500 ಕುರ್ಚಿಗಳು ಬೆಂಕಿಗೆ ಆಹುತಿಯಾಗಿದ್ದು, ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾದ್ಯತೆ ಇದೆ ಎನ್ನಲಾಗಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ನೂರಾರು ಜನರು ಘಟನಾ ಸ್ಥಳದಲ್ಲಿ ಸೇರಿದ್ದು, ಘಟನೆಗೆ ಸಂಬಂಧಿಸಿದಂತೆ 24 ಗಂಟೆಯೊಳಗೆ ದುಷ್ಕರ್ಮಿಗಳನ್ನು ಪತ್ತೆ ಮಾಡದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Facebook Comments

comments