ಚಿಕ್ಕಮಗಳೂರು,ಮಾರ್ಚ್ 24: ಮೂಡಿಗೆರೆ ತಾಲ್ಲೂಕಿನ ಬಿಳುಗುಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಹಾಗೂ ಅನ್ಯಕೋಮಿನ ಅಪ್ರಾಪ್ತ ಬಾಲಕನ ನಡುವಿನ ವಿಚಾರವು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಸಂಬಂಧ ಪೊಲೀಸರು ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡಿದ್ದು, ಮತಾಂತರದ ಒತ್ತಾಯ, ಬ್ಲಾಕ್ಮೇಲ್ ಹಾಗೂ ಹಲ್ಲೆಯಂತಹ ಗಂಭೀರ ಆರೋಪಗಳಡಿ ತನಿಖೆ ಆರಂಭಿಸಿದ್ದಾರೆ.

ಬಾಲಕಿಯ ತಂದೆ ನೀಡಿದ ದೂರಿನನ್ವಯ, ಅಪ್ರಾಪ್ತ ಬಾಲಕ ಮತ್ತು ಆತನ ತಂದೆ ಇಲಿಯಾಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲಕಿಯು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನನ್ನು ವಿವಾಹವಾಗಬೇಕು ಎಂದು ಬಾಲಕ ಪೀಡಿಸುತ್ತಿದ್ದ ಎನ್ನಲಾಗಿದೆ. ಬಾಲಕಿ ಇದಕ್ಕೆ ನಿರಾಕರಿಸಿದಾಗ, ಆಕೆಯ ಕೆಲವು ಖಾಸಗಿ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿ ಬ್ಲಾಕ್ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಬಿಎನ್ಎಸ್ 329(4), ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ-2022, ಐಟಿ ಆಕ್ಟ್ ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಮೊಕದ್ದಮೆ ಹೂಡಿದ್ದಾರೆ.
ಮತ್ತೊಂದೆಡೆ, ಹಲ್ಲೆಗೊಳಗಾದ ಅಪ್ರಾಪ್ತ ಬಾಲಕ ಕೂಡ ದೂರು ನೀಡಿದ್ದು, ಆತನ ಹೇಳಿಕೆಯಂತೆ ಆರು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾರ್ಚ್ 23ರ ಸಂಜೆ ಕಬಾಬ್ ಅಂಗಡಿಯ ಬಳಿ ಬಾಲಕನನ್ನು ಕರೆಸಿಕೊಂಡ ಪ್ರಶಾಂತ್, ಸುದೇವ್, ಪ್ರಣೀತ್, ಚಂದ್ರು, ಪುಷ್ಪ ಮತ್ತು ವಿನೋದ್ ಎಂಬುವವರು ಸುತ್ತುವರಿದು ಕೆನ್ನೆಗೆ ಹೊಡೆದು, ಕುತ್ತಿಗೆ ಹಿಸುಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. “ನಾವಿಬ್ಬರೂ ಈ ಹಿಂದೆ ಪ್ರೀತಿಸುತ್ತಿದ್ದೆವು. ಆದರೆ, ಪೋಷಕರು ಬುದ್ಧಿವಾದ ಹೇಳಿದ ಮೇಲೆ ಓದಿನ ಕಡೆ ಗಮನ ಹರಿಸಿದ್ದೆವು. ಹಳೆಯ ವಿಚಾರವನ್ನು ಇಟ್ಟುಕೊಂಡು ಈಗ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ” ಎಂದು ಬಾಲಕ ದೂರಿನಲ್ಲಿ ತಿಳಿಸಿದ್ದಾನೆ. ಘಟನೆಯಿಂದಾಗಿ ಬಿಳುಗುಳ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಸದ್ಯ ಎರಡೂ ಕಡೆಯ ದೂರುಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ.