ಸಚಿವ ಯು.ಟಿ.ಖಾದರ್ ದ್ವಂದ್ವ ನೀತಿ ಬಹಿರಂಗ, ರಾಹುಲ್ ಟೀಕೆ ಅಕ್ರಮ, ದೇಶದ್ರೋಹ ಸಕ್ರಮ ?

ಮಂಗಳೂರು, ಫೆಬ್ರವರಿ 21: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಡೆದುಕೊಂಡ ರೀತಿ ಗೊಂದಲಗಳಿಗೆ ಕಾರಣವಾಗುವಂತೆ ಮಾಡಿದೆ.

ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಸುಳ್ಯದಲ್ಲಿ ಫೆಬ್ರವರಿ 16 ರಂದು ಯೋಧರಿಗೆ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಯೋಧರ ಹತ್ಯೆಯಿಂದ ಆಕ್ರೋಶಭರಿತ ಪ್ರತಿಭಟನಾಕಾರರು ಪಾಕಿಸ್ಥಾನಕ್ಕೆ ಬಾಂಬ್ ಹಾಕಿ ಎನ್ನುವ ಘೋಷಣೆಯನ್ನು ಕೂಗಿದ್ದರು.

ಇದರಿಂದ ಕೆರಳಿದ ಸುಳ್ಯ ಎಸ್.ಐ ಮಂಜುನಾಥ್ ಘೋಷಣೆ ಕೂಗಿದ ವ್ಯಕ್ತಿಗೆ ಕೇಸು ಹಾಕಿ ಜೈಲಿಗಟ್ಟುವ ಬೆದರಿಕೆಯನ್ನು ನೀಡಿದ್ದರು.

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಎಸ್.ಐ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಲಾಗಿತ್ತು.

ಆದರೆ ಈ ವರೆಗೂ ಪಾಕಿಸ್ಥಾನಕ್ಕೆ ಧಿಕ್ಕಾರ ಕೂಗದಂತೆ ತಡೆದು ದೇಶದ್ರೋಹದ ಕೃತ್ಯ ನಡೆಸಿದ ಎಸ್.ಐ ವಿರುದ್ಧ ಪೋಲೀಸ್ ಇಲಾಖೆಯಾಗಲೀ, ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಆಗಲೀ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ.

ಆದರೆ ದೆಹಲಿಯಲ್ಲಿ ಯೋಧರ ಪ್ರಾರ್ಥಿವ ಶರೀರದ ಮುಂದೆ ನಿಂತು ಮೊಬೈಲ್ ನೋಡುತ್ತಿದ್ದ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯ ವರ್ತನೆಯನ್ನು ಆಕ್ಷೇಪಿಸಿದ ಪಿ.ಡಿ.ಒ ಮೇಲೆ ಕ್ರಮ ಕೈಗೊಳ್ಳುವಂತೆ ಸ್ವತಹ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಬಂಧ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪಿ.ಡಿ.ಒ ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ ತಕ್ಷಣ ಪಿ.ಡಿ.ಒ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುವ ಜಿಲ್ಲಾ ಉಸ್ತುವಾರಿ ಸಚಿವರು ದೇಶದ ವಿರುದ್ಧವಾಗಿ ನಿಂತ ಪೋಲೀಸ್ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವಂತೆ ಏಕೆ ಸೂಚಿಸಿಲ್ಲ ಎನ್ನುವ ಪ್ರಶ್ನೆ ಏಳಲಾರಂಭಿಸಿದೆ.

ಸುಳ್ಯದ ಮಂಡೆಗೋಲು ಗ್ರಾಮಪಂಚಾಯತ್ ವ್ಯಾಪ್ತಿಯ ಬೀಟ್ ಪೋಲೀಸ್ ವಾಟ್ಸ್ ಅಪ್ ಗ್ರೂಪ್ ನಲ್ಲಿ ತಮಗೆ ಬೇರೊಂದು ಗ್ರೂಪ್ ನಲ್ಲಿ ಬಂದ ಚಿತ್ರವನ್ನು ಫಾರ್ವರ್ಡ್ ಮಾಡಿದ್ದರು.

ಗ್ರೂಪ್ ನಲ್ಲಿದ್ದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಗಮನಕ್ಕೆ ತಂದ ತಕ್ಷಣವೇ ಪಿ.ಡಿ.ಒ ಮೇಲೆ ಕ್ರಮಕ್ಕೆ ಖಾದರ್ ಸೂಚಿಸಿದ್ದಾರಲ್ಲದೆ, ಸರಕಾರಿ ಸಭೆಯಲ್ಲೂ ಪಿಡಿಒ ಮೇಲೆ ರೇಗಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

Facebook Comments

comments