ಪಣಜಿ,ಏಪ್ರಿಲ್ 08: ಗೋವಾದ ಬಂಬೋಲಿಮ್-ಡೋನಾ ಪೌಲಾ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 23 ವರ್ಷದ ಯುವತಿ ದೀಕ್ಷಾ ಪರ್ವಾಡ್ಕರ್ ಮೃತಪಟ್ಟಿದ್ದಾರೆ. ಅತಿವೇಗವಾಗಿ ಬಂದ ಮಿನಿ ಕೂಪರ್ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಕಾರು ಚಾಲಕ, ಗೋವಾದ ಖ್ಯಾತ ಉದ್ಯಮಿಯ ಪುತ್ರ ಡೇರಿಯಸ್ ಡಯಾಸ್ನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ದೀಕ್ಷಾ ಮತ್ತು ಆಕೆಯ ಸಹೋದ್ಯೋಗಿ ಅರುಣ್ಕುಮಾರ್ (26) ಗೋವಾದ ಪಂಚತಾರಾ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಕೆಲಸ ಮುಗಿಸಿಕೊಂಡು ಇಬ್ಬರೂ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಅತಿವೇಗವಾಗಿ ಬಂದ ಮಿನಿ ಕೂಪರ್ ಕಾರು ಇವರ ಬೈಕ್ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಸುಮಾರು 50 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ದೀಕ್ಷಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದು, ಅರುಣ್ಕುಮಾರ್ ಗೋವಾ ಮೆಡಿಕಲ್ ಕಾಲೇಜಿನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಅಪಘಾತಕ್ಕೀಡಾದ ಮಿನಿ ಕೂಪರ್ ಕಾರು ಇತ್ತೀಚೆಗಷ್ಟೇ ಖರೀದಿಸಲಾಗಿದ್ದು, ಅದಕ್ಕೆ ಇನ್ನೂ ಕಾಯಂ ನೋಂದಣಿ ಸಂಖ್ಯೆಯೂ ಸಿಕ್ಕಿರಲಿಲ್ಲ. ಕಾರಿನ ಹ್ಯಾಂಡಲ್ ಮೇಲೆ ಇನ್ನೂ ಹೊಸತನದ ರಿಬ್ಬನ್ಗಳು ಹಾಗೆಯೇ ಇದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಕಾರು ಗಂಟೆಗೆ 100 ಕಿ.ಮೀ ಗಿಂತಲೂ ಹೆಚ್ಚಿನ ವೇಗದಲ್ಲಿತ್ತು ಎಂದು ಅಂದಾಜಿಸಲಾಗಿದ್ದು, ತೀವ್ರ ಘರ್ಷಣೆಯಿಂದಾಗಿ ಕಾರಿನ ಏರ್ಬ್ಯಾಗ್ಗಳು ಕೂಡ ತೆರೆದುಕೊಂಡಿವೆ.
ಆರೋಪಿ ಚಾಲಕ ಡೇರಿಯಸ್ ಡಯಾಸ್ನನ್ನು ಪೊಲೀಸರು ಬಿಎನ್ಎಸ್ ಸೆಕ್ಷನ್ 106ರ ಅಡಿಯಲ್ಲಿ ಬಂಧಿಸಿದ್ದಾರೆ. ಈತ ಗೋವಾದಲ್ಲಿ ಪ್ರಖ್ಯಾತ ಬೇಕರಿ ಮತ್ತು ಹೋಟೆಲ್ ಉದ್ಯಮ ಹೊಂದಿರುವ ಆಂಡ್ರ್ಯೂ ಡಯಾಸ್ ಅವರ ಪುತ್ರ ಎಂದು ತಿಳಿದುಬಂದಿದೆ. ಚಾಲಕನ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.