ನವದೆಹಲಿ, ಮೇ 22: ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಮಾತೃಸಂಸ್ಥೆ ‘ಮೆಟಾ’ (Meta), ಜಾಗತಿಕ ಮಟ್ಟದಲ್ಲಿ ತನ್ನ ಒಟ್ಟು ಸಿಬ್ಬಂದಿ ಪೈಕಿ ಶೇ. 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ವೆಚ್ಚ ಕಡಿತ ಹಾಗೂ ಎಐ ಮೂಲಸೌಕರ್ಯದ ಹೂಡಿಕೆಗೆ ಹಣ ಕ್ರೋಡೀಕರಿಸುವ ಸಲುವಾಗಿ ಸುಮಾರು 8,000 ಉದ್ಯೋಗಿಗಳನ್ನು ಕೆಲಸದಿಂದ ಮುಕ್ತಿಗೊಳಿಸಲು ಕಂಪನಿ ಅಧಿಕೃತವಾಗಿ ಚಾಲನೆ ನೀಡಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ಮೂಲಗಳು ದೃಢಪಡಿಸಿವೆ.

ಮೇ 20ರ ಬುಧವಾರದಂದು ಜಾಗತಿಕ ಮಟ್ಟದಲ್ಲಿ ಈ ಲೇ-ಆಫ್ (Layoff) ಪ್ರಕ್ರಿಯೆ ಆರಂಭವಾಗಿದ್ದು, ಉತ್ತರ ಅಮೆರಿಕ ಸೇರಿದಂತೆ ಹಲವು ಪ್ರಮುಖ ವಲಯಗಳ ಉದ್ಯೋಗಿಗಳಿಗೆ ಅಂದು ಮನೆಯಿಂದಲೇ ಕೆಲಸ ಮಾಡುವಂತೆ (Work from home) ಸೂಚಿಸಲಾಗಿತ್ತು. ಮೇ 20 ರ ಮಧ್ಯರಾತ್ರಿ ದಾಟಿದ ಬಳಿಕ ಸಿಂಗಾಪುರ, ಯುರೋಪ್ ಹಾಗೂ ಅಮೆರಿಕದ ಕಚೇರಿಗಳ ಸಿಬ್ಬಂದಿಗೆ ಇಮೇಲ್ ಮೂಲಕ ವಜಾ ಆದೇಶಗಳನ್ನು ರವಾನಿಸಲಾಗಿದೆ.
ಮೆಟಾ ಸಂಸ್ಥೆಯು ಕೇವಲ ಉದ್ಯೋಗ ಕಡಿತಕ್ಕೆ ಸೀಮಿತವಾಗದೆ, ಸದ್ಯ ಕಾರ್ಯನಿರ್ವಹಿಸುತ್ತಿರುವ ಸುಮಾರು 7,000 ಉದ್ಯೋಗಿಗಳನ್ನು ನೂತನವಾಗಿ ಆರಂಭಿಸಲಾಗಿರುವ ಎಐ ಆಧಾರಿತ ವಿಶೇಷ ತಾಂತ್ರಿಕ ತಂಡಗಳಿಗೆ ವರ್ಗಾವಣೆ ಮಾಡುತ್ತಿದೆ. ಮುಖ್ಯವಾಗಿ ‘ಅಪ್ಲೈಡ್ ಎಐ ಇಂಜಿನಿಯರಿಂಗ್’ (Applied AI Engineering) ಮತ್ತು ‘ಏಜೆಂಟ್ ಟ್ರಾನ್ಸ್ಫಾರ್ಮೇಷನ್ ಆಕ್ಸಿಲರೇಟರ್’ (Agent Transformation Accelerator) ವಿಭಾಗಗಳನ್ನು ಬಲಪಡಿಸಲಾಗುತ್ತಿದ್ದು, ಮಾನವ ಶ್ರಮವನ್ನು ಕಡಿತಗೊಳಿಸಿ ಸ್ವಯಂಚಾಲಿತವಾಗಿ ಕೆಲಸ ನಿರ್ವಹಿಸುವ ‘ಎಐ ಏಜೆಂಟ್ಗಳನ್ನು’ ಅಭಿವೃದ್ಧಿಪಡಿಸುವುದು ಇದರ ಪ್ರಮುಖ ಗುರಿಯಾಗಿದೆ. ಈ ಒಟ್ಟಾರೆ ಬೆಳವಣಿಗೆಯಿಂದಾಗಿ ಸಂಸ್ಥೆಯ ಪ್ರತಿ ಐದು ಉದ್ಯೋಗಿಗಳಲ್ಲಿ ಒಬ್ಬರು ವರ್ಗಾವಣೆ ಅಥವಾ ಉದ್ಯೋಗ ನಷ್ಟದ ಭೀತಿ ಎದುರಿಸುತ್ತಿದ್ದಾರೆ.